

ಮಡಿಕೇರಿ ಡಿ.31 NEWS DESK : ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ವಿರಾಜಪೇಟೆ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಿಟ್ಟಂಗಾಲ ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಾಯತ್ರಿ, ಕೇಚಂಡ ಪ್ರಸನ್ನ, ಮದ್ದಂಡ ಮೋಣ್ಣಪ್ಪ, ಕುಪ್ಪಣಮಾಡ ಮಾದಪ್ಪ, ಕಾಡೇಮಾಡ ಸುಬ್ಬಯ್ಯ, ಮಚ್ಚಂಡ ಬೋಪಣ್ಣ, ಅಪ್ಪಂಡೆರಂಡ ದೇವಕ್ಕಿ, ಕೊಂಗೆಪ್ಪಂಡ ಕುಟ್ಟಪ್ಪ, ಪ್ರೇಮಕುಮಾರಿ, ಶಿವಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್ ಸನ್ಮಾನಿತ ಶಿಕ್ಷಕರ ಸಾಧನೆಯನ್ನು ವಿವರಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವರ್ಷಂಪ್ರತಿ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ನಿರಂತರವಾಗಿ ಉತ್ತಮ ಸಾಧನೆಯನ್ನು ತೊರುತ್ತಾ ಬರುವುದರೊಂದಿಗೆ ಕೊಡಗಿನಲ್ಲಿ ಶಾಲಾ ಹಂತದ ವ್ಯಾಸಾಂಗ ಮುಗಿಸಿದವರು ಹಾಕಿಯಲ್ಲಿ ಒಲಿಂಪಿಕ್ಸ್ ನಲ್ಲೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವುದರ ಹಿಂದೆ ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದದ್ದಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ತೆಕ್ಕಡೆ ಗಾಯತ್ರಿ ಮಾತನಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಸರ್ಕಾರಗಳು ಸಕಾಲಕ್ಕೆ ತುಂಬಿ ಕ್ರೀಡಾ ಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಲು ಪ್ರೊತ್ಸಹಿಸಬೇಕೆಂದು ಕರೆ ನೀಡಿದರು. ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಪುಗ್ಗೇರ ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶೈಕ್ಷಣಿಕ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಿಮ್ಮಕಣಿರ ಸೋಮಯ್ಯ, ಪ್ರಮುಖರಾದ ಮಲ್ಲಂಗಡ ಸತ್ಯ, ಚೇಂದೀರ ಡ್ಯಾನಿ, ತಿರ್ನೆಲಿಮಾಡ ರಮಾನಂದ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ರಾಘವೇಂದ್ರ ಮುಂತಾದವರು ಹಾಜರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ತೆಕ್ಕಡೆ ಹರಿಣಿ ಪ್ರಾರ್ಥಿಸಿದರು. ಮೂಕಳೇರ ಮೀರಾ ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿರಾಜಪೇಟೆ ಶೈಕ್ಷಣಿಕ ತಾಲೂಕು ಘಟಕದ ಅಧ್ಯಕ್ಷರಾದ ಮಂಡೇಪಂಡ ತಮ್ಮಯ್ಯ ಸ್ವಾಗತಿಸಿದರು.











