

ಮೈಸೂರು, ಡಿ.31 NEWS DESK : ಅಕ್ರಮವಾಗಿ ದೇಶದೊಳಗೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಅತ್ಯಂತ ಕಳವಳಕಾರಿ ವಿಷಯ ಎಂದರೆ ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ. ಈ ಸಂಬಂಧ ಗೃಹ ಸಚಿವರಿಗೆ ಪತ್ರ ಬರೆದಿರುವ ಸಂಸದ ಯದುವೀರ್ ಒಡೆಯರ್ ಇಂಥ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. :: ವೀಡಿಯೋ ವೈರಲ್ :: ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ಬಾಂಗ್ಲಾದೇಶದ ಮೂವರು ಅಕ್ರಮ ವಲಸಿಗರು (ಆಟೋ ಚಾಲಕರು) ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನಾವು ವಾಸಿಸುತ್ತಿದ್ದು, ಇಲ್ಲಿ ಯಾವುದೇ ಭಯ, ಆತಂಕವಿಲ್ಲ. ಅಕ್ರಮವಾಗಿ ಇಲ್ಲಿ ನೆಲಸಬಹುದು ಎಂದು ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಎಂದು ಯದುವೀರ್ ತಿಳಿಸಿದ್ದಾರೆ. ಇದು ಒಂದು ವೇಳೆ ನಿಜವಾದರೆ, ಪೊಲೀಸ್ ಇಲಾಖೆಯ ವೈಫಲ್ಯ ಎಂಬುದು ಕಂಡುಬರುತ್ತದೆ. ಕಾರ್ಮಿಕರ ನೋಂದಣಿ, ಸಾರಿಗೆ ಪರವಾನಗಿ, ಅಕ್ರಮ ವಲಸೆ ಸೇರಿದಂತೆ ಇತರೆ ವಿಷಯಗಳಲ್ಲಿ ರಾಜ್ಯ ಗೃಹ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ವಿವರಿಸಿದ್ದಾರೆ. :: ಮತ್ತೊಂದು ವೀಡಿಯೋ :: ಮತ್ತೊಂದು ವೀಡಿಯೋದಲ್ಲಿಯೂ ಇದೇ ರೀತಿಯ ಹೇಳಿಕೆಗಳನ್ನು ನೀಡಿರುವುದು ಕಂಡುಬಂದಿದೆ. ಈ ಎರಡು ವೀಡಿಯೋಗಳ ಲಿಂಕ್‌ಗಳನ್ನು ಗೃಹ ಸಚಿವರಿಗೆ ಕಳುಹಿಸಿಕೊಡಲಾಗಿದೆ. ಇನ್ನಾದರೂ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ. ಕರ್ನಾಟಕವು ಈಗ ಅಕ್ರಮ ವಲಸಿಗರಿಗೆ ಸೂಕ್ತ ತಾಣವಗುತ್ತಿದೆ ಎಂದು ಇಲ್ಲಿ ಗೃಹ ಇಲಾಖೆ ಮತ್ತು ಪೊಲೀಸರ ವೈಫಲ್ಯ ಇರುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಾಮಾಜಿಕ ಜಾಲತಾಣ ಲಿಂಕ್. ಪೊಲೀಸ್ ಪರಿಶೀಲನೆಯಲ್ಲಿನ ನಿರ್ಲಕ್ಷ್ಯ, ಕಾರ್ಮಿಕ ನೋಂದಣಿ, ವಾಹನ ಚಾಲನೆ ಪರವಾನಗಿ ಮತ್ತು ಅಕ್ರಮವಾಗಿ ನೆಲೆಸಿರುವ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ತಪ್ಪೆಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ. :: ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳಬೇಕು :: ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳಲು, ಕಾನೂನು ಮತ್ತು ಸುವ್ಯವಸ್ಥೆ ಖಚಿತಪಡಿಸಿಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭದ್ರತೆಗಾಗಿ ತುರ್ತು ಕ್ರಮವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.










