

ಮಡಿಕೇರಿ ಡಿ.31 NEWS DESK : ನಗರದ ಸುದರ್ಶನ್ ವೃತ್ತದ ಬಳಿ ಸರ್ಕಾರದ ಅನುದಾನದಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ ನಡೆದಿದೆ. ಈ ಹಂತದಲ್ಲಿ ಕೆಲವರು ಸರ್ಕಾರಿ ನೌಕರರಿಂದ ದೇಣಿಗೆ ಸಂಗ್ರಹಿಸಲು ಹೊರಟಿರುವುದನ್ನು ತೀವ್ರವಾಗಿ ವಿರೋಧಿಸಿರುವ ದಸಂಸ ವಿಭಾಗೀಯ ಸಂಯೋಜಕ ಎಂ.ಎನ್.ರಾಜಪ್ಪ, ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದೆಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದರ್ಶನ್ ವೃತ್ತದ ಪಕ್ಕದಲ್ಲಿರುವ ನಾಲ್ಕು ಸೆಂಟ್ ಸರ್ಕಾರಿ ಜಾಗದಲ್ಲಿ ಸರ್ಕಾರದ ವತಿಯಿಂದ ಸುಮಾರು 44 ಲಕ್ಷ ರೂಗಳ ವೆಚ್ಚದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ. ಅದರ ನಿರ್ವಹಣೆಗಾಗಿ ಶಾಸಕರು ಕೆಲವು ದಲಿತ ಸಂಘಟನೆಗಳು ಮುಖಂಡರನ್ನು ಮೇಲುಸ್ತುವಾರಿ ಸಮಿತಿ ಮಾಡಿದ್ದಾರೆ. ಇವರುಗಳಿಗೆ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸುವುದಷ್ಟೇ ಕೆಲಸ. ಹೀಗಿದ್ದೂ ಇತ್ತೀಚೆಗೆ ಸಮಿತಿಯ ಕೆಲವು ಸದಸ್ಯರು ಸರ್ಕಾರಿ ನೌಕರರಿಂದ, ಅಧಿಕಾರಿಗಳಿಂದ ದೇಣಿಗೆ ಪಡೆಯಲು ಹೊರಟಿರುವುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲವೆಂದು ಹೇಳಿದರು. ಈಗಾಗಲೇ ಸರ್ಕಾರವೇ ಪುತ್ಥಳಿ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಿರುವಾಗ, ಸರ್ಕಾರಿ ನೌಕರರಿಂದ ದೇಣಿಗೆ ಪಡೆಯುವ ಅವಶ್ಯಕತೆ ಇಲ್ಲ.ರಾಜ್ಯದಲ್ಲಿ ಎಲ್ಲಿಯೂ ದಲಿತ ಸಂಘÀಟನೆಗಳು ಪುತ್ಥಳಿ ನಿರ್ಮಾಣಕ್ಕೆ ದೇಣಿಗೆ ಪಡೆದಿರುವ ಉದಾಹರಣೆ ಇಲ್ಲ. ದೇಣಿಗೆ ಪಡೆಯಲು ಹೊರಟಿರುವವರು ದುಸ್ಸಾಹಸಕ್ಕೆ ಮುಂದಾಗದಿರಲಿ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯೆಂದು ಸ್ಪಷ್ಟಪಡಿಸಿದರು. :: ಮನವಿ :: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಮನವಿ ಮಾಡಿಕೊಂಡ ರಾಜಪ್ಪ ಅವರು, ಯಾರೂ ಪುತ್ಥಳಿ ನಿರ್ಮಾಣಕ್ಕೆ ದೇಣಿಗೆ ನೀಡಬಾರದು. ಹಾಗೇನಾದರೂ ದೇಣಿಗೆ ಕೇಳಿದಲ್ಲಿ ನಿರ್ಭೀತಿಯಿಂದ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಉಪನಿರ್ದೆಶಕರ ಗಮನಕ್ಕೆ ತರಬೇಕು. ಪುತ್ಥಳಿ ನಿರ್ಮಾಣ ಭ್ರಷ್ಟಾಚಾರ ರಹಿತವಾಗಿವಾಗಿರಬೇಕು ಎನ್ನುವುದು ನಮ್ಮೆಲ್ಲರ ಆಶಯವೆಂದರು. :: ಆರೋಪಿಗಳ ಬಂಧನವಾಗಲಿ :: ಹುಬ್ಬಳ್ಳಿಯ ಇನಾಂ ವೀರಾಂಪುರದಲ್ಲಿ ನಡೆದ ಗರ್ಭಿಣಿಯೊಬ್ಬರ ಮರ್ಯಾದಾ ಹತ್ಯೆ ಪ್ರಕರಣವು ಅತ್ಯಂತ ಖಂಡನೀಯ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದುಗಳ ಹತ್ಯೆ ಬಗ್ಗೆ ಪ್ರತಿಭಟನೆ ನಡೆಸಿದ ಹಿಂದು ಸಂಘಟನೆಗಳು, ಕರ್ನಾಟಕದಲ್ಲಿ ದಲಿತ ಯುವಕ ಹಾಗೂ ಆತನ ಪತ್ನಿ ಗರ್ಭಿಣಿಯ ಮೇಲೆ ನಡೆದ ಈ ಅಮಾನುಷ ಕೃತ್ಯದ ಬಗ್ಗೆ ದನಿ ಎತ್ತದಿರುವುದು ವಿಷಾದನೀಯವೆಂದರು. ಸುದ್ದಿಗೋಷ್ಠಿಯಲ್ಲಿ ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್, ಜಿಲ್ಲಾ ಸಮಿತಿ ಸದಸ್ಯ ಎಂ.ಈ.ಪೊನ್ನಪ್ಪ, ಮಂಜುನಾಥ್, ಡೀಲಕ್ಷ, ಸೋಮವಾರಪೇಟೆ ತಾಲ್ಲೂಕು ಸಂಯೋಜಕ ಚಂದ್ರಶೇಖರ್ ಉಪಸ್ಥಿತರಿದ್ದರು.











