ವಿರಾಜಪೇಟೆ ಜ.1 NEWS DESK : ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ನಿವೃತ್ತಿ ಹೊಂದಿದ್ದಾರೆ. ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಲ್ಲಿ ತಮ್ಮ ಕಾರ್ಯವೈಖರಿಯ ಮೂಲಕ ಜನಾನುರಾಗಿ ಸುದೀರ್ಘ 32 ವರ್ಷ ಐದು ತಿಂಗಳ ಕಾಲ ಉತ್ತಮವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ವಯೋನಿವೃತ್ತರಾಗಿದ್ದಾರೆ. ಮೂಲತ ಗೋಣಿಕೊಪ್ಪಲುವಿನ ದಿವಂಗತ ನಾಮೇರ ಡಾ.ಕುಟ್ಟಪ್ಪ ಹಾಗೂ ನಾಮೇರ ಜಾನಕಿ ಕುಟ್ಟಪ್ಪ ಅವರ ಪುತ್ರಿಯಾಗಿರುವ ಜ್ಯೋತಿ ಪ್ರಕಾಶ್, ಜೀವಶಾಸ್ತ್ರದಲ್ಲಿ ಎಂ.ಎಸ್ಸಿ, ಎಂ.ಫಿಲ್ ಪದವಿಯನ್ನು ಪಡೆಯುದರ ಜೊತೆಗೆ 1993 ಜುಲೈ 22 ರಂದು ಹಾಸನ ಜಿಲ್ಲೆಯ ಬೇಲೂರುವಿನ ಸರ್ಕಾರಿ ಪಿ ಯು ಕಾಲೇಜಿನಲ್ಲಿ ಉಪನ್ಯಾಸಕಿ ವೃತ್ತಿ ಜೀವನವನ್ನು ಆರಂಭಿಸಿದರು. ತದನಂತರ ಆರ್. ಸಿ. ರೋಡ್ ಹಾಸನದ ಪಿ. ಯು. ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸಿ, 1997 ಜೂನ್ 20ಕ್ಕೆ ವಿರಾಜಪೇಟೆ ಸರ್ಕಾರಿ ಪಿ. ಯು. ಕಾಲೇಜಿನಲ್ಲಿ ವರ್ಗಾವಣೆಯಾಗಿ ಬಂದು ವೃತ್ತಿಯನ್ನು ಮುಂದುವರೆಸಿದರು. 2018 ಜೂನ್ 21 ರಂದು ಇದೇ ಕಾಲೇಜಿನ ಪ್ರಾಂಶುಪಾಲರಾಗಿ ಭಡ್ತಿ ಹೊಂದಿದರು. ಮಾತ್ರವಲ್ಲದೆ ತಮ್ಮ ಸೇವಾವಧಿಯಲ್ಲಿ ಎರಡು ಬಾರಿ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾಗಿ, ಕೊಡಗು ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಜ್ಯೋತಿ ಪ್ರಕಾಶ್ ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಗೋಣಿಕೊಪ್ಪಲುವಿನ ಬಾಸ್ಕೆಟ್ ಬಾಲ್ ಕ್ಲಬ್ ನ ಸದಸ್ಯೆಯಾಗಿದ್ದಾರೆ. ತಾತಂಡ ಜ್ಯೋತಿ ಅವರು, ಕೊಡವ ಪೊಮ್ಮಕ್ಕಡ ಒಕ್ಕೂಟ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷೆಯಾಗಿ 2024 ರ ಏಪ್ರಿಲ್ ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ವಿರಾಜಪೇಟೆಯ ಕುಕ್ಲೂರುವಿನ ದಿವಂಗತ ತಾತಂಡ ಪ್ರಕಾಶ್ ಸೋಮಯ್ಯ ಪತ್ನಿ. ಇವರಿಗೆ ಟಿ.ರೆಚೆಲ್ ಸೋಮಯ್ಯ ಪುತ್ರಿ ಇದ್ದಾಳೆ. ಇವರು ಕುಕ್ಲೂರುವಿನಲ್ಲಿ ವಾಸವಿದ್ದಾರೆ. ತಮ್ಮ ಸರ್ಕಾರಿ ಸೇವೆಯಲ್ಲಿ ಉಪನ್ಯಾಸಕಿ ಹಾಗೂ ಪ್ರಾಂಶುಪಾಲೆಯಾಗಿ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಜತೆಗೆ ದಕ್ಷ ಆಡಳಿತವನ್ನು ನೀಡಿ ಕೊಡಗು ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದಾರೆ.











