ಪುತ್ತೂರು ಜ.1 NEWS DESK : ಜಿಎಲ್ ಮಾಲ್ ಉತ್ಸವದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಯುವ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಎಲ್ ವನ್ ಮಾಲ್ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆ ಭಾನುವಾರ ಜಿಎಲ್ ವನ್ ಮಾಲ್’ನಲ್ಲಿ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳಾದ ಅಪ್ರಮೇಯ, ಶ್ರೇಯಾ, ಪ್ರಣ್ವಿತ್, ವಿಶೇಷ ಚೇತನ ಕಲಾವಿದೆ ರಕ್ಷಿತಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಪ್ರತಿ ಮಕ್ಕಳಲ್ಲೂ ಸೃಜನಾತ್ಮಕ ಪ್ರತಿಭೆ ಹುದುಗಿರುತ್ತದೆ. ಅದನ್ನು ಹೊರತೆಗೆದು, ವೇದಿಕೆ ನೀಡುವ ಕಾರ್ಯ ಇಲ್ಲಿ ಮಾಡಲಾಗುತ್ತಿದೆ ಎಂದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್’ರಾಜ್ ಮಾತನಾಡಿ, ಕಲೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಒಟ್ಟು ಏಳು ವಿಭಾಗಗಳಲ್ಲಿ ನಡೆಯುತ್ತಿರುವ ಈ ಚಿತ್ರಕಲಾ ಸ್ಪರ್ಧೆಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದು ಸಂತೋಷದ ವಿಚಾರ ಎಂದರು. ಇದೇ ಸಂದರ್ಭ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ಅವರನ್ನು ಸನ್ಮಾನಿಸಲಾಯಿತು. ಜಿ.ಎಲ್. ಸಮೂಹ ಸಂಸ್ಥೆಗಳ ಜನರಲ್ ಮ್ಯಾನೇಜರ್ ಸಂತೋಷ್ ನಾಯಕ್ ಪೂಣಚ್ಚ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಪೂಜಾರಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷ ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.











