ಸುಂಟಿಕೊಪ್ಪ ಜ.1 NEWS DESK : ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದು, ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ತಿಳಿಸಿದರು. ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆದ ಜಿ ಟೌನ್ ಯುನೈಟೆಡ್ ಎಫ್‍ಸಿ ವತಿಯಿಂದ ಡ್ರಗ್ಸ್ ಮುಕ್ತ ನಮ್ಮ ನಾಡು ಎಂಬ ಧೈಯ ವಾಕ್ಯದೊಂದಿಗೆ ನಡೆದ ಎರಡನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕ್ರೀಡೆಗೆ ಮಾತ್ರ ಒತ್ತು ನೀಡದೆ ಅದರೊಂದಿಗೆ ಯುವ ಸಂಘಟಗರು ಒಳ್ಳೆಯ ಸಮಾಜವನ್ನು ನಿರ್ಮಿಸಲು ಮಾದಕ ವ್ಯಸಕ್ಕೆ ಬಲಿಯಾಗಬೇಡಿ. ಪೋಷಕರು ತಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್‍ನ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ, ಮಾದಕ ವಸ್ತುಗಳ ವ್ಯಸನದಿಂದ ಯುವಜನತೆ ದಾರಿ ತಪ್ಪಿ ಹಣದಾಸೆಯಿಂದ ಸಮಾಜ ಘಾತಕ ಶಕ್ತಿಗಳಾಗಿ ಬೆಳೆಯುತ್ತಾರೆ. ಯುವಜನತೆಯನ್ನು ಗುರಿಯಾಗಿಸಿ ಇಟ್ಟುಕೊಂಡು ದುಷ್ಟ ಶಕ್ತಿಗಳು ವಿಜ್ರಂಭಿಸುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕರೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿಕೊಂಡರು. ಇದೇ ಸಂದರ್ಭ ಪಿಎಲ್ ಹರ್ಷದ್ ಮಾತನಾಡಿ, ಕ್ರೀಡೆಯಲ್ಲಿ ಸೋಲನ್ನು ಎದುರಿಸಿ ಗೆಲುವನ್ನು ಸಾಧಿಸುವುದು ನಿರಂತರ ಅಭ್ಯಾಸ ಮತ್ತು ಪರಿಶೀಲನೆಗಳ ಪ್ರತಿಯೊಬ್ಬ ಕ್ರೀಡಾಪಟುಗಳು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕ್ರೀಡಾಪಟು ಶಾರೀರಿಕವಾಗಿ ಸದೃಢವಾಗಿರಲು ಸಹಕಾರಿಯಾಗಿದ್ದು, ಪಾಠದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧಕರಾಗುವ ಮೂಲಕ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು. ಸಮಾರಂಭದಲ್ಲಿ ಜಿಟೌನ್‍ಎಫ್‍ಸಿ ಯ ಸಂಚಾಲಕರುಗಳಾದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಬೀರ್, ರಫೀಕ್‍ಖಾನ್, ನಮ್ಮ ಸುಂಟಿಕೊಪ್ಪ ಬಳಗದ ಕೆ.ಎಸ್.ಅನಿಲ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹಕೀಂ, ಸುನ್ನಿ ಶಾಫಿ ಜುಮ ಮಸೀದಿಯ ಅಧ್ಯಕ್ಷ ಎಂ.ಎಂ.ರಫೀಕ್ ಉಪಸ್ಥಿತರಿದ್ದರು.











