ಸುಂಟಿಕೊಪ್ಪ ಜ.1 NEWS DESK : ಜಿ ಟೌನ್ ಯುನೈಟೆಡ್ ಎಫ್‍ಸಿ ವತಿಯಿಂದ ನಡೆದ ಎರಡನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಮರ್ಚೆಂಟ್ಸ್ ಎಫ್‍ಸಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅಂತರಾಜ್ಯದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಒಟ್ಟು 28 ತಂಡಗಳು ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಫೈನಲ್ ಪಂದ್ಯಾವಳಿಯಲ್ಲಿ ಕೊಡಗಿನ ಗೋಣಿಕೊಪ್ಪ ಕ್ಲಾಸಿಕ್ ಎಫ್ ಸಿ ತಂಡವು ದ್ವಿತೀಯ ಸ್ಥಾನ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಗೆ ತೆರೆ ಬಿತ್ತು. ರೋಚಕವಾಗಿ ನಡೆದ ಫೈನಲ್ ಪಂದ್ಯಾವಳಿ ಮೊದಲಾರ್ಧದ 7ನೇ ನಿಮಿಷದಲಿ ಆದಿಲ್ ಗಳಿಸಿದ ಗೋಲಿನಿಂದ ಮಂಗಳೂರು ಮಚೆರ್ಂಟ್ಸ್ ಎಫ್ ಸಿ ತಂಡ ಮುನ್ನಡೆ ಸಾಧಿಸಿದ್ದರು. ದ್ವಿತಿಯಾರ್ಧದ ಕೊನೆಯ ನಿಮಿಷದಲ್ಲಿ ಗೋಣಿಕೊಪ್ಪ ಕ್ಲಾಸಿಕ್ ಎಫ್ ಸಿ ತಂಡದ ಜುನೈದ್ ಒಡೆದ ಗೋಲಿನಿಂದ ಸಮಬಲದಲ್ಲಿ ಪಂದ್ಯಾಟದ ಪೂರ್ಣ ಅವಧಿ ಕೊನೆಗೊಂಡಿತು. ನಂತರ ನಡೆದ ಟ್ರೈಬೇಕರ್ ನಲ್ಲಿ ಮಂಗಳೂರು ತಂಡದ ಗೋಲ್ ಕೀಪರ್ ಅಜೀಜ್ ಅವರ ಅತ್ಯುತ್ತಮ ರಕ್ಷಣೆಯಿಂದ 3-2 ರ ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜೀ ಟೌನ್ ಯುನೈಟೆಡ್ ಎಫ್‍ಸಿಯ ಸ್ಥಾಪಕ ಅಧ್ಯಕ್ಷ ಫಾಸಿಲ್ ಉಸ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡ ಹಾಗೂ ರನ್ನರ್ಸ್ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಪಂದ್ಯಾವಳಿಯ ದಾನಿಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಎಂ.ಲತೀಫ್, ಉದ್ಯಮಿ ನಿಖಿಲ್, ಅರ್ಷದ್ ಪಿ.ಎಲ್, ಗ್ರಾಮ ಪಂಚಾಯತ್ ಸದಸ್ಯರಾದ ಶಬೀರ್ ರಫೀಕಾಂತ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಹಕೀಂ, ನಮ್ಮ ಸುಂಟಿಕೊಪ್ಪ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅನಿಲ್‍ಕುಮಾರ್, ಸುನ್ನಿ ಶಾಫಿ ಜುಮ ಮಸೀದಿ ಅಧ್ಯಕ್ಷ ಎಂಎಂ ರಫೀಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸೆಸ್ಟೋ ಬಾಲ್ ಅಂತರಾಷ್ಟ್ರೀಯ ಕ್ರೀಡಾಪಟು ಶಾಹಿಲ್ ಉಸ್ಮಾನ್ ಹಾಗೂ ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ ಅಬುಬಕರ್ ಉಬೈಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.











