ಮಡಿಕೇರಿ ಜ.1 NEWS DESK : ಗೋಣಿಕೊಪ್ಪಲಿನ ಹರಿಶ್ಚಂದ್ರ ಪುರದ ನಿವಾಸಿ, ಆಟೋ ಚಾಲಕ ನವಾಜ್ ಸಾವಿನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಾಡಿಗೆ ನೆಪದಲ್ಲಿ ನವಾಜ್ ನನ್ನು ಕರೆದೊಯ್ದ ಕೆಲವರು ಹಾತೂರು ಕುಂದಾ ರಸ್ತೆಯಲ್ಲಿ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸಿರುವ ಕುರಿತು ತಿಳಿದು ಬಂದಿದೆ. ಮೃತದೇಹದಲ್ಲಿ ಹಲ್ಲೆಯ ಗುರುತುಗಳಿದ್ದು, ಇದೊಂದು ಅಮಾನುಷ ಕೃತ್ಯವಾಗಿದೆ. ಈ ದಾಳಿಯನ್ನು ಎಸ್‍ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ಕಠಿಣ ಕಾನೂನು ಕ್ರಮಕ್ಕೆ ಗುರಿ ಪಡಿಸಬೇಕು. ಆ ಮೂಲಕ ಮೃತ ನವಾಜ್ ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಎಸ್‍ಡಿಪಿಐ ಪಕ್ಷ ಬೀದಿಗಳಿದು ಹೋರಾಟ ನಡೆಸಲಿದೆ ಎಂದು ಅಮೀನ್ ಮೊಹಿಸಿನ್ ಎಚ್ಚರಿಕೆ ನೀಡಿದ್ದಾರೆ.











