ವಿರಾಜಪೇಟೆ ಜ.1 NEWS DESK : ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿರಾಜಪೇಟೆಯಲ್ಲಿ ಪತ್ರ ಚಳುವಳಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಸಂಘಟನೆ ವತಿಯಿಂದ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಇರುವ ಪ್ರದಾನ ಅಂಚೆ ಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಪೋಸ್ಟ್ ಮಾಡಿ ಬಳಿಕ ಹುಬ್ಬಳ್ಳಿಯ ಲಿಂಗಾಯಿತ ಸಮುದಾಯದ ಯುವತಿ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದ ಕಾರಣಕ್ಕೆ, ಆಕೆ ಗರ್ಭಿಣಿಯಿದ್ದಾಗಲೇ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿ, ಆಕೆಯ ಗಂಡ ಮತ್ತವನ ತಂದೆತಾಯಿಗಳ ಮೇಲೂ ದೈಹಿಕವಾಗಿ ದಾಳಿ ನಡೆಸಿದ್ದಾರೆ. ಕೃತ್ಯವನ್ನು ಖಂಡಿಸುವ ಜೊತೆಗೆ, ಮರ್ಯಾದೆ ಹತ್ಯೆಗಳ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಸಂಘಟನೆಯವರು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯದಂತೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ನಿರಂತರ ಹೋರಾಟಗಳನ್ನು ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಿದ್ದೇವೆ. ಈ ಬಗ್ಗೆ ಪತ್ರ ಚಳುವಳಿಯನ್ನು ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಆದ್ಯತೆ ನೀಡಬೇಕು. ಇತ್ತೀಚೆಗೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅತ್ಯಾಚಾರಗಳು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅಂತರ್ಜಾತಿ ವಿವಾಹವಾದ ಕಾರಣ ಹೆತ್ತ ಮಗಳನ್ನು ತಂದೆ ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾಜದಲ್ಲಿ ಮಹಿಳೆಯರು ನಿರ್ಭೀತಿಯಿಂದ ಜೀವನ ನಡೆಸುವ ಸುರಕ್ಷಿತ ಪರಿಸರ ನಿರ್ಮಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದ್ದರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದರು. ಮರ್ಯಾದೆಗೇಡು ಹತ್ಯೆಗಳು ಮತ್ತು ಜಾತಿ ದೌರ್ಜನ್ಯಗಳನ್ನು ತಡೆಗಟ್ಟಲು, ಪರಿಹಾರ ಕ್ರಮಗಳನ್ನು ರೂಪಿಸಲು ಹಾಗೂ ಶಿಕ್ಷಾರ್ಹ ಕ್ರಮಗಳನ್ನು ಸರಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಜಿಲ್ಲಾ ಸಮಿತಿ ಸದಸ್ಯರಾದ ಪ್ರೇಮ, ತಾಲ್ಲೂಕು ಸಮಿತಿ ಸದಸ್ಯರಾದ ವರಲಕ್ಷ್ಮಿ, ಮಂಜುಳಾ, ಹೇಮಾ, ಜಿಲ್ಲಾ ಸಮಿತಿ ಸದಸ್ಯರಾದ ಕೋಮಲ, ದೇವಕ್ಕಿ ಸೇರಿದಂತೆ ಇತರರು ಇದ್ದರು.












