ಮಡಿಕೇರಿ ಜ.1 NEWS DESK : ಇಂದಿನ ತಂತ್ರಜ್ಞಾನದ ಯುಗದಲ್ಲಿ ಬರಹಗಾರರ ಸಂಖ್ಯೆ ಕ್ಷೀಣಿಸುತ್ತಿದ್ದು, ಹೊಸ ಬರಹಗಾರರಿಗೆ ಪ್ರೋತ್ಸಾಹ ಮತ್ತು ದಾನಿಗಳ ಸಹಕಾರದ ಅಗತ್ಯವಿದೆ ಎಂದು ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಅವರು ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಹೊಸ ವರ್ಷದ ಪ್ರಯುಕ್ತ ಕೊಡವ ಮಕ್ಕಡ ಕೂಟದ 123ನೇ ಪುಸ್ತಕ ಹಾಗೂ ಲೇಖಕಿ ಕರವಂಡ ಸೀಮಾ ಗಣಪತಿ ಅವರ ಮೂರನೇ ಪುಸ್ತಕ “ನೊಂದ ಜೀವ” ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರಿರುವ ಈ ಯುಗದಲ್ಲಿ ಬರಹಗಾರರನ್ನು ಗುರುತಿಸುವುದು ಅಪರೂಪವೆನಿಸಿದೆ. ಪರಿಸ್ಥಿತಿ ಹೀಗಿದ್ದರೂ ಲೇಖಕಿ ಕರವಂಡ ಸೀಮಾ ಗಣಪತಿ ಅವರು, ತಮ್ಮ ಕಾರ್ಯದ ನಡುವೆಯೂ ಪುಸ್ತಕವನ್ನು ಹೊರತಂದಿದ್ದಾರೆ. ಆ ಮೂಲಕ ಲೇಖಕರಿಗೆ ತಾಳ್ಮೆ ಮುಖ್ಯ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ತಾತಪಂಡ ಜ್ಯೋತಿ ಸೋಮಯ್ಯ ಅವರು ಮಾತನಾಡಿ, ತಮ್ಮ ಕಾರ್ಯಚಟುವಟಿಕೆಯ ನಡುವೆಯೂ ಕಾದಂಬರಿ ಬರೆದು ಓದುಗರ ಮುಂದಿಡುವುದು ಸವಾಲಿನ ಕೆಲಸ. ಓದುಗರ ಸಂಖ್ಯೆ ಕಡಿಮೆ ಇದ್ದರೂ ದಾನಿಗಳು ಲೇಖಕರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು. *ದಾಖಲೀಕರಣ ಪುಸ್ತಕ ಬರಲಿ* ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕೊಡಗಿನಲ್ಲಿ ಸಾಧಕರಿಗೆ ಕೊರತೆ ಇಲ್ಲ, ಇಲ್ಲಿ ಇತಿಹಾಸ ನಿರ್ಮಿಸಿದ ದೊಡ್ಡ ಸಂಖ್ಯೆಯ ಸಾಧಕರಿದ್ದಾರೆ. ಇವರುಗಳ ಇತಿಹಾಸವನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ದಾಖಲೀಕರಿಸಬೇಕು. ಇದು ಸಂಶೋಧಕರಿಗೆ ಸಹಕಾರಿಯಾಗಲಿದೆ. ಈ ಕಾರ್ಯಕ್ಕೆ ಬರಹಗಾರರು ಮುಂದಾದಲ್ಲಿ ಕೊಡವ ಮಕ್ಕಡ ಕೂಟ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಮೊಬೈಲ್ಗಳ ಬಳಕೆಯಿಂದ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. *ಯೋಧರಿಗೆ ಅಪಮಾನ* ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಸೈನಿಕರ ಪ್ರತಿಮೆಗಳಿಗೆ ಕೆಲವರು ಹೂವಿನ ಹಾರವನ್ನು ಹಾಕಿ, ಕಾರ್ಯಕ್ರಮದ ನಂತರ ಅದನ್ನು ತೆಗೆಯದೆ ಅಪಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಬೊಳ್ಳಜಿರ ಬಿ.ಅಯ್ಯಪ್ಪ, ಹೂವಿನ ಹಾರಗಳನ್ನು ಎರಡು ಮೂರು ದಿನಗಳು ಕಳೆದರೂ ತೆಗೆಯದೇ ಇರುವುದರಿಂದ ಸೇನಾನಿಗಳಿಗೆ ಗೌರವ ಸಲ್ಲಿಸುವ ಬದಲು ಅಪಮಾನ ಮಾಡಿದಂತಾಗುತ್ತದೆ. ತೋರ್ಪಡಿಕೆಯ ಗೌರವ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಯಾವುದೇ ಅನುದಾನವಿಲ್ಲದೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಮಹತ್ವಾಕಾಂಕ್ಷೆಯ 123 ಪುಸ್ತಕವನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಲಾಗಿದ್ದು, ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ ಎಂದರು. ಕೊಡವ ಮಕ್ಕಡ ಕೂಟದ ವಾರ್ಷಿಕೋತ್ಸವದ ನೆನಪಿಗಾಗಿ ಫೆ.18 ರಂದು 125 ಮತ್ತು 126ನೇ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದೇವೆ ಎಂದು ತಿಳಿಸಿದರು. ನೊಂದ ಜೀವ ಪುಸ್ತಕದ ಲೇಖಕಿ ಕರವಂಡ ಸೀಮಾ ಗಣಪತಿ ಮಾತನಾಡಿ, ಓದುಗರ ಸಂಖ್ಯೆ ಹೆಚ್ಚಾದರೆ, ಬರಹಗಾರರ ಸಂಖ್ಯೆ ಹೆಚ್ಚಾಗುತ್ತದೆ. ಲೇಖಕರು ತಮ್ಮ ಕಾರ್ಯಚಟುವಟಿಕೆಯ ನಡುವೆಯೂ ಬರಹಗಳಿಗೆ ಒತ್ತು ನೀಡುತ್ತಾರೆ. ಅದಕ್ಕೆ ಓದುಗರ ಸಹಕಾರ ಅಗತ್ಯ ಎಂದರು. ಇದು ನನ್ನ ಮೂರನೇ ಪುಸ್ತಕವಾಗಿದ್ದು, ಮೂರು ಪುಸ್ತಕಗಳಿಗೆ ಕೊಡವ ಮಕ್ಕಡ ಕೂಟ ಸಹಕಾರ ನೀಡಿದೆ. ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ ದಾನಿಗಳು ಹಾಗೂ ಕುಟುಂಬಸ್ಥರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮಾತನಾಡಿ, “ನೊಂದ ಜೀವ” ಪುಸ್ತಕವು ಹೆಣ್ಣುಮಗಳ ಜೀವನದ ಕಥಾ ಹಂದರವನ್ನು ಒಳಗೊಂಡಿದೆ. ತಾಯಿ ಇಲ್ಲದೆ ತಾನೊಬ್ಬಳೆ ಸಮಾಜ ಹಾಗೂ ಕುಟುಂಬದ ಸವಾಲುಗಳನ್ನು ಎದುರಿಸುವ ಕುರಿತು ಪುಸ್ತಕದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರಬರುವಂತಾಗಲಿ ಎಂದು ಹಾರೈಸಿದರು. ಸಮಾಜ ಸೇವಕ ಮಂಡೇಪಂಡ ರತನ್ ಕುಟ್ಟಯ್ಯ ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು.











