ಮಡಿಕೇರಿ ಜ.1 NEWS DESK : ಅಮರಶಿಲ್ಪಿ ಜಕಣಾಚಾರಿ ಅವರು ನಾಡುಕಂಡ ಅದ್ಭುತ ಶಿಲ್ಪಿ ಎಂದು ಸಾಹಿತಿ ಉ.ರಾ.ನಾಗೇಶ್ ಅವರು ವರ್ಣಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಮರಶಿಲ್ಪಿ ಜಕಣಾಚಾರಿ ಅವರು ಹೊಯ್ಸಳ ಶೈಲಿಯ ಕಲ್ಯಾಣ ಚಾಲುಕ್ಯರ ದೇವಾಲಯಗಳಾದ ಬೇಲೂರು ಮತ್ತು ಹಳೇಬೀಡುವಿನಂತಹ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು. ‘ಜಕಣಾಚಾರಿ ಅವರು ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನಿಸಿ ಸುಮಾರು 80 ವರ್ಷಗಳ ಕಾಲ ಬದುಕಿ 150 ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿ ಅಮರಶಿಲ್ಪಿ ಬಿರುದು ಹೊಂದಿದ್ದಾರೆ ಎಂದು ಉ.ರಾ.ನಾಗೇಶ್ ಅವರು ತಿಳಿಸಿದರು.’ ಬಾಲ್ಯದಿಂದಲೇ ಶಿಲ್ಪಕಲೆಗೆ ತನ್ನನ್ನು ಅರ್ಪಿಸಿಕೊಂಡು ದೇಶದಾದ್ಯಂತ ಸಂಚರಿಸಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದರು. ಕರ್ನಾಟಕ ಜನಪದ ಸಂಸ್ಕøತಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದ್ದು, ರಾಜ್ಯ ಸರ್ಕಾರವು ಮಾಸ್ಟರ್ ಶಿಲ್ಪಿಗಳಿಗಾಗಿ ‘ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ’ಯನ್ನು ನೀಡುತ್ತಿದೆ ಎಂದು ಸಾಹಿತಿ ಅವರು ವಿವರಿಸಿದರು. ಭೂಮಿ ಗೆದ್ದರೆ ರಾಜ್ಯ, ಮನಸ್ಸು ಗೆದ್ದರೆ ಪೂಜ್ಯ ಭಾವನೆಯಿಂದ ಬಹಳ ಕಾಲ ಉಳಿಯುತ್ತಾರೆ. ಆ ನಿಟ್ಟಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಇಂದಿಗೂ ಸಹ ಸ್ಮರಣೀಯ ಎಂದು ತಿಳಿಸಿದರು. ‘ಜನಮಾನಸದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಉಳಿದಿದ್ದು, ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯಲ್ಲಿ ಜಕಣಾಚಾರಿ ಅವರ ಬಗ್ಗೆ ಉಲ್ಲೇಖವಿರುವುದು ಸ್ಮರಣಾರ್ಥ ಎಂದು ಉ.ರಾ.ನಾಗೇಶ್ ಅವರು ಸ್ಮರಿಸಿದರು.’ ಜಕಣಾಚಾರಿ ಅವರು ಒಬ್ಬ ವಿಶೇಷ ಎಂಜಿನಿಯರ್ ಎಂದರೆ ಅತಿಶಯೋಕ್ತಿಯಲ್ಲ. ತತ್ವಜ್ಞಾನದ ಜೊತೆಗೆ ತಪಸ್ಸು ಮಾಡಿ ಶಿಲ್ಪ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಿದ್ದಾರೆ. ಜಕಣಾಚಾರಿ ಅವರ ದೂರದೃಷ್ಟಿ ಮೆಚ್ಚುವಂತದ್ದು ಎಂದು ಉ.ರಾ.ನಾಗೇಶ್ ಅವರು ಹೇಳಿದರು. ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಎಸ್.ಜೆ.ದೇವದಾಸ್ ಅವರು ಮಾತನಾಡಿ ನಾಡಿನ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಶಿಲ್ಪಕಲೆಗಳನ್ನು ನೀಡಿದ್ದು, ಇವರ ಏಕಾಗ್ರತೆ, ಸಾಧನೆ ಸದಾ ಸ್ಮರಣೀಯ ಎಂದರು. ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾಗರಾಜು ಅವರು ಮಾತನಾಡಿ ಬೇಲೂರು, ಹಳೇಬೀಡು ಸೇರಿದಂತೆ ಹಲವು ಶಿಲ್ಪಗಳನ್ನು ಕಣ್ಣು ಬಿಟ್ಟು ನೋಡಬೇಕು. ಕಿವಿ ತೆರೆದಿಟ್ಟು ಕೇಳಬೇಕು ಅಂತಹ ಅದ್ಭುತ ಕೆತ್ತನೆ ಮಾಡಿದ್ದಾರೆ ಎಂದು ಅವರು ಹೇಳಿದರು. ಪ್ರಮುಖರಾದ ಪ್ರಕಾಶ್ ಆಚಾರ್ಯ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರ ಪರಿಕಲ್ಪನೆ ಮತ್ತು ದೂರದೃಷ್ಟಿ ಮತ್ತು ತಾಳ್ಮೆ ಮೆಚ್ಚುವಂತದ್ದು, ಅವರು ಕೆತ್ತನೆ ಮಾಡಿರುವ ಶಿಲ್ಪಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ ಎಂದರು. ಬಾಬು ಆಚಾರ್ಯ ಅವರು ಮಾತನಾಡಿ ವಿಶ್ವಕರ್ಮ ಸಮಾಜದವರು, ಮರ ಕೆಲಸ, ಚಿನ್ನದ ಕೆಲಸ, ಕಬ್ಬಿಣದ ಕೆಲಸ ಹೀಗೆ ವೃತ್ತಿ ಕೌಶಲ್ಯಗಳನ್ನು ನಿರ್ವಹಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ವಿದ್ಯಾಲತಾ ವೆಂಕಟರಮಣ ಅವರು ಮಾತನಾಡಿ ವಿಶ್ವಕರ್ಮ ಸಮಾಜ, ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು. ಪ್ರಮುಖರಾದ ಅಶೋಕ್, ದಾಮೋದರ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರು. ಭವ್ಯ ನಿರೂಪಿಸಿ, ವಂದಿಸಿದರು.











