ಮಡಿಕೇರಿ ಜ.1 NEWS DESK : ಪರಿಶಿಷ್ಟ ಸಮುದಾಯದ ಯುವಕನನ್ನು ವಿವಾಹವಾದ ಕಾರಣಕ್ಕಾಗಿ ಯುವತಿಯನ್ನು ಆಕೆಯ ತಂದೆ ಮತ್ತಿತರರು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಗಲ್ಲುಶಿಕ್ಷೆಗೆ ಗುರಿ ಪಡಿಸಬೇಕೆಂದು ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕರಾದ ಜೆ.ಎಲ್.ಜನಾರ್ಧನ್ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹುಬ್ಬಳ್ಳಿ ತಾಲ್ಲೂಕು ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿಯ ಮರ್ಯಾದಾ ಹತ್ಯೆ ಪ್ರಕರಣ ಇಡೀ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಜಾತಿ ವ್ಯವಸ್ಥೆ ಇನ್ನೂ ಕೂಡ ಜೀವಂತವಾಗಿರುವುದಕ್ಕೆ ಈ ಘಟನೆ ಸ್ಪಷ್ಟ ಸಾಕ್ಷಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಆಗಿದ್ದರೂ ಸಂವಿಧಾನದ ರಕ್ಷಣೆಯಡಿ ಪ್ರತಿಯೊಬ್ಬರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗದೆ ಇರುವುದು ವಿಷಾದಕರ ಎಂದು ತಿಳಿಸಿದ್ದಾರೆ. ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಮರ್ಯಾದಾ ಹತ್ಯೆ ಪ್ರಕರಣ ಕಪ್ಪುಚುಕ್ಕೆಯಾಗಿದೆ. ಮೃತ ಯುವತಿಯ ಪತಿ, ಪರಿಶಿಷ್ಟ ಸಮುದಾಯದ ವಿವೇಕಾನಂದ ದೊಡ್ಡಮನಿ ಹಾಗೂ ಕುಟುಂಬದ ಸದಸ್ಯರು ಅತೀವ ನೋವನ್ನು ಅನುಭವಿಸುತ್ತಿದ್ದು, ರಕ್ಷಣೆ ಇಲ್ಲದೆ ಭಯದ ವಾತಾವರಣದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಈ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ಮತ್ತು ಸರಕಾರ ಪರಿಹಾರ ಹಾಗೂ ಜಮೀನನ್ನು ನೀಡಬೇಕು. ಹೇಯ ಕೃತ್ಯವೆಸಗಿದ ಎಲ್ಲಾ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆಗೆ ನೀಡಬೇಕು. ಈ ರೀತಿಯ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬದುಕುವ ಹಕ್ಕನ್ನು ಪ್ರತಿಯೊಂದು ಸಮಾಜಕ್ಕೆ ನೀಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರು ಹಾಗೂ ಸರಕಾರದ ಬಳಿ ಮನವಿ ಮಾಡುವುದಾಗಿ ಜೆ.ಎಲ್.ಜನಾರ್ಧನ್ ಹಾಗೂ ಎಂ.ಎಸ್.ವೀರೇಂದ್ರ ಹೇಳಿದ್ದಾರೆ.










