ಮಡಿಕೇರಿ ಜ.1 NEWS DESK : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನಾ ಕಾರ್ಯಕ್ರಮ ಪ್ರಗತಿ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ವಿದ್ಯುತ್, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಗರಾಭಿವೃದ್ಧಿ, ನೀರಾವರಿ ಹೀಗೆ ವಿವಿಧ ಇಲಾಖೆಗಳು ನಿಗಧಿ ಮಾಡಿರುವ ಶೇಕಡಾವಾರು ಪ್ರಗತಿ ಸಾಧನೆಗೆ ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. :: ಜಿಲ್ಲಾ ಜಾಗೃತಿ ಸಮಿತಿ ಸಭೆ :: ಸಫಾಯಿ ಕರ್ಮಚಾರಿಗಳ/ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‍ಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯದ ಪೌರಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಡಿ.ಆರ್.ರಾಜು ಅವರು ಮಾತನಾಡಿ ಗೋಣಿಕೊಪ್ಪದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಜಾಗ ಗುರುತಿಸಿರುವುದು ಸಂತಸ ತಂದಿದೆ ಎಂದರು. ಕಳೆದ ಬಾರಿ ಸಭೆಯಲ್ಲಿ ಗೋಣಿಕೊಪ್ಪದಲ್ಲಿನ ಪೌರಕಾರ್ಮಿಕರು ಚರಂಡಿ ಬದಿಯಲ್ಲಿ ವಾಸಿಸುತ್ತಾರೆ ಎಂದು ಪ್ರಸ್ತಾಪಿಸಲಾಗಿತ್ತು, ಅದಕ್ಕಾಗಿ ಪೌರಕಾರ್ಮಿಕರಿಗೆ ಜಾಗ ಗುರುತಿಸಿ ನುಡಿದಂತೆ ನಡೆದಿರುವುದಕ್ಕೆ ಶ್ಲಾಘನೀಯ ಎಂದು ರಾಜು ಅವರು ಹೇಳಿದರು. ಈಗಾಗಲೇ ಗುರುತಿಸಿರುವ ಜಾಗಕ್ಕೆ ಶೀಘ್ರ ಹಕ್ಕುಪತ್ರ ನೀಡುವಂತಾಗಬೇಕು. ಜಿಲ್ಲೆಯಲ್ಲಿನ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಡಿ.ಆರ್.ರಾಜು ಅವರು ಮನವಿ ಮಾಡಿದರು. ಗೋಣಿಕೊಪ್ಪದಲ್ಲಿ ಪೌರಕಾರ್ಮಿಕ 25-30 ಕುಟುಂಬ ಇರುವುದರಿಂದ ಎಲ್ಲರಿಗೂ ಹಕ್ಕು ಪತ್ರ ನೀಡುವಂತಾಗಬೇಕು ಎಂದು ಕೋರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾ.ಪಂ.ಇಒ ಅಪ್ಪಣ್ಣ ಅವರು ಕಂದಾಯ ಜಾಗದಲ್ಲಿ 25 ಕುಟುಂಬಗಳಿದ್ದು, ಅವರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುವುದು ಎಂದರು. ಸದಸ್ಯರಾದ ರಂಗಸ್ವಾಮಿ ಅವರು ಮಾತನಾಡಿ ಜಿಲ್ಲೆಯ ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ವಹಣೆಯನ್ನು ಸ್ಥಳೀಯ ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ನೀಡಬೇಕು ಎಂದು ಕೋರಿದರು. ಸದಸ್ಯರಾದ ವಿಜಯ್ ಕುಮಾರ್, ಪರಮೇಶ್ ಇತರರು ಪೌರಕಾರ್ಮಿಕರ ಕುಂದುಕೊರತೆ ಬಗ್ಗೆ ಮಾಹಿತಿ ನೀಡಿದರು. :: ಸಭೆ :: ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್.ಮುತ್ತಪ್ಪ, ಜಾಯ್ಸ್ ಮೆನೇಜಸ್, ಪಿ.ಪಿ.ಸುಕುಮಾರ್, ಜನಾರ್ಧನ ಜೆ.ಎಲ್, ಇತರರು ಇದ್ದರು. ಹೆಚ್.ಎಸ್.ಮುತ್ತಪ್ಪ ಅವರು ಮಾತನಾಡಿ 2018 ಮತ್ತು 2019 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.











