ಮಡಿಕೇರಿ ಜ.2 NEWS DESK : ಕೊಡವ ಭಾಷೆಯನ್ನು ಭಾರತ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕಿರುವ ಹಿನ್ನೆಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಹಿತಿ/ ವರದಿ ಒದಗಿಸಬೇಕಿದೆ. ಆದ್ದರಿಂದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ, ಜ.5 ರಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಪೂರ್ವಭಾವಿ ಮಹತ್ವದ ಸಭೆಯು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. ಸಭೆಗೆ ಕೊಡವ ಭಾಷಿಕ ವಿವಿಧ ಸಮಾಜದ ಪ್ರಮುಖರು, ಕೊಡವ ಭಾಷಾಭಿಮಾನಿಗಳು, ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರು, ಕಲಾವಿದರು ಸಭೆಯಲ್ಲಿ ಪಾಲ್ಗೊಂಡು ಸಲಹೆ, ಮಾರ್ಗದರ್ಶನ ನೀಡಬಹುದಾಗಿದೆ. ಹಾಗೆಯೇ ತಮ್ಮ ತಮ್ಮಲ್ಲಿ ಇರುವ ಕೊಡವ ಭಾಷೆ, ಸಂಸ್ಕೃತಿಯ ಬಗೆಗಿನ ಮಾಹಿತಿ, ಸಾಕ್ಷ್ಯಾಧಾರಗಳು, ಓಲೆಗರಿಗಳು, ಸಂಸ್ಕೃತಿಯ ಬಗೆಗಿನ ಬರಹಗಳು ಇದ್ದಲ್ಲಿ ಸಭೆಗೆ ತಂದು ಸಹಕರಿಸಬಹುದಾಗಿದೆ ಎಂದು ಕರ್ನಾಟಕ ಕೊಡವ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಕೋರಿದ್ದಾರೆ.










