ಮಡಿಕೇರಿ NEWS DESK ಜ.3 : ತುಳುನಾಡ ಜನರ ನಂಬುಗೆಯ ದೈವಗಳಲ್ಲೊಂದಾದ “ಕೊರಗಜ್ಜ” ದೈವದ ಕುರಿತಾದ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಲೈಫ್ ಬ್ಯಾನರ್ ನಡಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ‘ಕೊರಗಜ್ಜ’ ಚಿತ್ರದಲ್ಲಿರುವ ಆರು ಹಾಡುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಸಿನಿಮಾದ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಎಂಬ ಸ್ಪರ್ಧೆಯನ್ನು ಚಿತ್ರತಂಡ ಆಯೋಜಿಸಿದೆ. ಇದನ್ನು ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ತೀವ್ರವಾಗಿ ವಿರೋಧಿಸಿದೆ. ಈ ನಿರ್ಧಾರದಿಂದ ಚಿತ್ರತಂಡ ಹಿಂದೆ ಸರಿಯಬೇಕು, ತಪ್ಪಿದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಇರುವುದಾಗಿ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಎಚ್ಚರಿಕೆ ನೀಡಿದ್ದಾರೆ. ತುಳುನಾಡು ಮತ್ತು ಕೆಲವೇ ಪ್ರದೇಶಕ್ಕೆ ಸೀಮಿತವಾಗಿರುವ ದೈವ ಆರಾಧನೆಯನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಅಪಹಾಸ್ಯ ಮಾಡುವುದು ಸರಿಯಲ್ಲ. ದೈವ ಆರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೈವ ನರ್ತನ ಮಾಡುವವರು ಹಾಗೂ ದೈವ ಆರಾಧನೆ ಮಾಡುವವರ ಭಾವನೆಗೆ ದಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. “ಕೊರಗಜ್ಜ” ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಸ್ಪರ್ಧೆಯನ್ನು ಆಯೋಜಿಸಿ ಕೊರಗಜ್ಜ ದೈವದ ವೇಷಭೂಷಣ ತೊಟ್ಟು ರೀಲ್ಸ್ ಮಾಡಲು ಪ್ರೇರಣೆ ನೀಡಿರುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ‘ಕೊರಗಜ್ಜ’ ದೈವದ ಸಿನಿಮಾ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ದೈವದ ಶಕ್ತಿ ಮತ್ತು ಆಚಾರ, ವಿಚಾರದ ಕುರಿತು ಅರಿವಿಲ್ಲದ ವಿದ್ಯಾರ್ಥಿಗಳು, ಯುವ ಸಮೂಹ ಹಾಗೂ ಸಾರ್ವಜನಿಕರು ಬಹುಮಾನಕ್ಕಾಗಿ ರೀಲ್ಸ್ ಮಾಡುವುದರಿಂದ ‘ಕೊರಗಜ್ಜ’ ದೈವಕ್ಕೆ ಅಪಚಾರವಾಗುವ ಸಾಧ್ಯತೆಗಳಿದೆ. ಅಲ್ಲದೆ ರೀಲ್ಸ್ ನ್ನು ವೀಕ್ಷಿಸಿದವರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ದೈವ ನಿಂದನೆಯಾಗುವ ಆತಂಕವೂ ಇದೆ. ‘ಕೊರಗಜ್ಜ’ ಚಿತ್ರದ ಹಾಡುಗಳನ್ನು ಬಳಸಿಕೊಂಡು ಸೃಜನಶೀಲ ರೀಲ್ಸ್ ಮಾಡಿದವರಿಗೆ ಒಟ್ಟು ಒಂದು ಕೋಟಿ ರೂ. ಮೌಲ್ಯದ ಬಹುಮಾನ ನೀಡಲಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೆಚ್ಚು ವೀಕ್ಷಣೆ, ಲೈಕ್ ಪಡೆದ ರೀಲ್ಸ್‍ಗೆ ಬಹುಮಾನ ನೀಡಲಾಗುವುದು. ರಾಜ್ಯದ 31 ಜಿಲ್ಲೆಗಳಿಂದ ಪ್ರತ್ಯೇಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಅತ್ಯುತ್ತಮವಾಗಿ ರೀಲ್ಸ್ ಮಾಡಿದ ಮೂವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪ್ರಕಟಣೆ ನೀಡಿದೆ. ದೈವರಾಧನೆ ಪ್ರಚಾರ ಹಾಗೂ ಪ್ರದರ್ಶನದ ಕಲೆಯಲ್ಲ. ಸಿನಿಮಾದ ಪ್ರಚಾರಕ್ಕಾಗಿ ಈ ರೀತಿಯ ಗಿಮಿಕ್ ಗಳನ್ನು ಮಾಡಿ ಇಡೀ ದೈವಾರಾಧನೆಯನ್ನು ಬೀದಿಗೆ ತಂದು ದೈವ ಆರಾಧನಾ ಕ್ಷೇತ್ರಕ್ಕೆ ಅಪಮಾನ ಮಾಡುವುದನ್ನು ದೈವ ಆರಾಧಕರ ಹಾಗೂ ದೈವ ನರ್ತಕರ ಸಂಘ ಖಂಡಿಸುತ್ತದೆ ಎಂದು ಪಿ.ಎಂ.ರವಿ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಮತ್ತು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ದೈವ ಆರಾಧಕರ ಹಾಗೂ ದೈವ ನರ್ತಕರ ಭಾವನೆಗೆ ಗೌರವ ನೀಡಬೇಕೆಂದು ಮನವಿ ಮಾಡಿದರು. *ಸ್ಥಿತಿಗತಿ ಶೋಚನೀಯ* ಶೋಷಿತ ಸಮುದಾಯಕ್ಕೆ ಸೇರಿದ ಪರವ, ಪಂಬದ ಹಾಗೂ ನಲಿಕೆ ಸಮುದಾಯದವರು 16 ಕಟ್ಟಳೆಗಳ ನಿಯಮಾನುಸಾರವಾಗಿ ಪ್ರಕೃತಿದತ್ತ ಸಿರಿ ಅರದಳ ತೊಟ್ಟು ದೈವದ ನರ್ತನ ಮಾಡುವವರಾಗಿದ್ದು, ಇವರ ಸ್ಥಿತಿಗತಿ ಶೋಚನೀಯವಾಗಿದೆ. ಇವರ ಅಭಿವೃದ್ಧಿಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದಿನ ಕಾಲಘಟ್ಟದಲ್ಲಿ ನ್ಯಾಯಾಲಯ, ಪೊಲೀಸ್ ಠಾಣೆಗಳು ಇಲ್ಲದಿದ್ದಾಗ ದೈವ ಆಹ್ವಾನಿತರು ನ್ಯಾಯ ಒದಗಿಸಿಕೊಡುತ್ತಿದ್ದರು. ದೈವಾರಾಧನೆ ಜಾನಪದ ಕಲೆಯ ಒಂದು ಭಾಗವಾಗಿದ್ದು, ಜಾನಪದ ವಿದ್ವಾಂಸರು ಈ ಬಗ್ಗೆ ಗಟ್ಟಿ ಧ್ವನಿ ಎತ್ತುವ ಅಗತ್ಯವಿದೆ ಎಂದು ಪಿ.ಎಂ.ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ಪಿ.ಕೆ.ದಿನೇಶ್, ಸಂಘಟನಾ ಕಾರ್ಯದರ್ಶಿ ಬಿ.ಆರ್.ರಮೇಶ್ ಹಾಗೂ ಸದಸ್ಯ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.










