ವಿರಾಜಪೇಟೆ ಜ.5 NEWS DESK : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿ ಹಾಗೂ ಕಾಲೇಜಿನ ಪ್ರಾಂಶುಪಾಲೆಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರನ್ನು ಕಾಲೇಜಿನ ವತಿಯಿಂದ ಬೀಳ್ಕೊಡುಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಚಿಲ್ಲವಂಡ ಕಾವೇರಪ್ಪ, ಪ್ರಾಂಶುಪಾಲರ ಶಿಸ್ತು ಹಾಗೂ ಕರ್ತವ್ಯ ನಿಷ್ಠೆ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಿದೆ. ಅವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲೆ ಜ್ಯೋತಿ ಪ್ರಕಾಶ್, ತಮ್ಮ ಸುದೀರ್ಘವಾದ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡು ಸಹೋದ್ಯೋಗಿಗಳ ಸಹಕಾರ ಹಾಗೂ ವಿದ್ಯಾರ್ಥಿಗಳ ಪ್ರೀತಿಯನ್ನು ಸ್ಮರಿಸಿ ಭಾವುಕರಾದರು. ಪ್ರಾಂಶುಪಾಲೆ ಜ್ಯೋತಿ ಅವರ ತಾಯಿ ನಾಮೇರ ಜಾನಕಿ ಕುಟ್ಟಪ್ಪ, ಕುಟುಂಬಸ್ಥರು, ಸಹ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ರೈಮಂಡ್ ಸ್ವಾಗತಿಸಿದರು, ಉಪನ್ಯಾಸಕಿ ಚೈತ್ರ ನಿರೂಪಿಸಿದರು, ಉಪನ್ಯಾಸಕಿ ಗಾಯತ್ರಿ ವಂದಿಸಿದರು.











