ಮಡಿಕೇರಿ ಜ.5 NEWSDESK : ಕೊಡವ ಭಾಷೆಯನ್ನು ಭಾರತ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಕುರಿತು ಸರ್ಕಾರದಿಂದ ವರದಿ ಕೇಳಲಾಗಿದ್ದು, ಈ ಸಂಬಂಧ ಉಪ ಸಮಿತಿಗಳ ತಂಡವನ್ನು ರಚಿಸಿಕೊಂಡು ಕಾನೂನಾತ್ಮಕ ಮಾನದಂಡದನ್ವಯ ವರದಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದ್ದಾರೆ. ಕೊಡವ ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಕುರಿತು ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು. ಕೊಡವ ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈಗಾಗಲೇ 2 ಸಲ ವರದಿ ಸಲ್ಲಿಸಲಾಗಿದೆ. ಹಾಗಾಗಿ ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆ ಪ್ರಕ್ರಿಯೆಯನ್ನು ಶಿಸ್ತುಬದ್ಧವಾಗಿ ನಿಯಮಾನುಸಾರದಂತೆ ನಡೆಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಎ.ಎಸ್.ಪೊನ್ನಣ್ಣ ಅವರು ಮನವಿ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಜೊತೆಗೆ ಕೊಡವ ಸಮಾಜಗಳು, ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು. ಇದು ಆರಂಭ ಮಾತ್ರ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಬೇಕು. ಸಮಿತಿ, ಉಪ ಸಮಿತಿಯ ತಂಡವನ್ನು ರಚಿಸಿಕೊಂಡು ವರದಿ ನೀಡುವಂತಾಗಬೇಕು. ಈ ಕಾರ್ಯದಲ್ಲಿ ಅಕಾಡೆಮಿ ಜೊತೆಗೆ ಎಲ್ಲಾ ಕೊಡವ ಭಾಷಿಕರ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಮುಖ್ಯಮಂತ್ರಿ ಅವರಿಗೆ ಕೊಡವ ಭಾಷೆ ಬಗ್ಗೆ ವಿಶೇಷ ಕಾಳಜಿ ಇದ್ದು, ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆ ಬಗ್ಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಹಾಗೆಯೇ ಮುಖ್ಯಮಂತ್ರಿ ಅವರ ಭೇಟಿಗೆ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಇದೇ ಸಂದರ್ಭದಲ್ಲಿ ತಿಳಿಸಿದರು. ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿದಲ್ಲಿ ಸಮುದಾಯ, ಜನಾಂಗ ಉಳಿಯಲು ಸಾಧ್ಯ. ಆದ್ದರಿಂದ ಈ ಬಗ್ಗೆ ಇನ್ನಷ್ಟು ಶ್ರಮವಹಿಸಬೇಕಿದೆ. ರಾಷ್ಟ್ರ ಮತ್ತು ರಾಜ್ಯಕ್ಕೆ ಕೊಡವ ಭಾಷಿಕರ ಕೊಡುಗೆ ಅಪಾರವಾಗಿದ್ದು, ಇದನ್ನು ಸ್ಮರಿಸುವಂತಾಗಬೇಕು ಎಂದರು. ಭಾಷೆಗಳು ಕಣ್ಮರೆಯಾಗಬಾರದು. ಎಲ್ಲಾ ಸಣ್ಣ ಸಣ್ಣ ಭಾಷೆಗಳು ಸಹ ಉಳಿಯಬೇಕು. ಭಾಷೆ ಉಳಿದಲ್ಲಿ ಸಂಸ್ಕøತಿ ಜನಾಂಗ ಉಳಿಯಲಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ಸರ್ಕಾರ ಕೊಡವ ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ವರದಿ ಕೇಳಿದ್ದು, ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದರು. ಕೊಡವ ಜನಾಂಗದ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಸಾಂಸ್ಕøತಿಕ, ಜಾನಪದ ಹಿನ್ನೆಲೆಯನ್ನು ಒಳಗೊಂಡು ಸಮಗ್ರ ಮಾಹಿತಿ ಒಳಗೊಂಡ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದು ವರದಿ ಸಿದ್ಧಪಡಿಸಲಾಗುವುದು ಎಂದರು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಹಲವು ಪ್ರಯೋಜನಗಳಿದ್ದು, ವಿಶೇಷ ಸ್ಥಾನಮಾನ ಹಾಗೂ ಅಧಿಕೃತ ಮನ್ನಣೆ ದೊರೆಯಲಿದೆ ಎಂದು ತಿಳಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನ, ಸಾಂಸ್ಕøತಿಕ ಸಮ್ಮೇಳನಗಳು ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕೊಡವ ಭಾಷೆ ಅಧ್ಯಯನಕ್ಕೆ ಅವಕಾಶ, ಕೇಂದ್ರ ಮತ್ತು ರಾಜ್ಯ ನಾಗರಿಕ ಸೇವೆಗಳಲ್ಲೂ ಸಹ ಕೊಡವ ಭಾಷೆ ಬಳಕೆಗೆ ಅವಕಾಶ, ಭಾಷೆ ಅಭಿವೃದ್ಧಿ ಸರ್ಕಾರದಿಂದ ಹಲವು ನೆರವು, ಹೀಗೆ ಹಲವು ಉಪಯೋಗಗಳು ದೊರೆಯಲಿದೆ ಎಂದು ಮಹೇಶ್ ನಾಚಯ್ಯ ಅವರು ವಿವರಿಸಿದರು. ಕೊಡವ ಭಾಷೆ, ಜಾನಪದ, ಕವನ, ಕತೆ, ಕಾದಂಬರಿ, ನಾಟಕ, ಹೀಗೆ ಹಲವರು ಕೊಡುಗೆ ನೀಡಿದ್ದಾರೆ. ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಐಚ್ಚೆಟ್ಟಿರ ಮುತ್ತಣ್ಣ, ಬಾಚಮಂಡ ಡಿ.ಗಣಪತಿ, ಮಂಡೀರ ಜಯ ಅಪ್ಪಣ್ಣ, ಬೊವೇರಿಯಂಡ ನಂಜಮ್ಮ ಚಿಣ್ಣಪ್ಪ, ಬಾಚರಣಿಯಂಡ ಪಿ.ಅಪ್ಪಣ್ಣ ಹೀಗೆ ಕೊಡವ ಭಾಷೆ ಹಾಗೂ ಸಂಸ್ಕøತಿಗೆ ಹಲವರ ಕೊಡುಗೆ ಅಪಾರವಾಗಿದೆ ಎಂದರು. ‘ಕೊಡವ ಆಟ್‍ಪಾಟ್, ಉಡುಗೆ ತೊಡುಗೆ, ಹೀಗೆ ಹಲವು ಸಾಂಸ್ಕøತಿಕ ಪರಂಪರೆ ಕಾಣಬಹುದಾಗಿದೆ. ಜೊತೆಗೆ ಕೊಡವ ಭಾಷಿಕರಲ್ಲಿ 21 ಸಮಾಜಗಳಿದ್ದು, ಕೊಡವ ಬಾಳೋಪಾಟ್‍ಕಾರ, ಕೊಡವ ಪದ್ಧತಿಕಾರ, ಕೊಡವ ಆಟ್‍ಕಾರ, ಕೊಡವ ಭಾಷಿಕಂಗ, ಅಮ್ಮಕೊಡವ, ಹೆಗ್ಗಡೆಯ, ಐರಿಯ, ಕೆಂಬಟ್ಟಿಯ, ಕೋಯವ, ಕೋಲೆಯ, ಕಣಿಯ, ಕಾಪಾಳ, ಕುಡಿಯ, ಅರಮನೆಪಾಲೆ, ಮಲಿಯ, ಮಾರಂಗಿ, ಮಡಿವಾಳ, ನಾಯಿಂದ, ಬಣ್ಣಂಗ, ಬಾಣಿಯ, ಬೂಣೆಪಟ್ಟಮ, ಪಣಿಕ, ಅಡಿಯ, ಕೊಡವ ನಾಯರ್, ಇಯಂಗಡಲ್ಲಿ ಕೊಡವಾಮೆಕೊತ್ತಿತ್ ಉಳ್ಳ ವಿಶೇಷ ಸಂಸ್ಕøತಿ, ಪದ್ಧತಿ ವಿಶೇಷ ಎಂದರು.’ ಕೊಡವ ಭಾಷಿಕರ ಸೇವೆಗಳು, ಕೊಡವ ಸೈನಿಕರು, ರಾಜಕೀಯ, ವೈದ್ಯಕೀಯ, ಕ್ರೀಡೆ, ಕೊಡವ ಹಾಕಿ ಹಬ್ಬ ಹೀಗೆ ಹಲವು ರೀತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕೋರಿದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ಮಾತನಾಡಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು. ಪ್ರಮುಖರಾದ ಪಿ.ಜಿ.ಅಯ್ಯಪ್ಪ ಅವರು ಮಾತನಾಡಿ ಕೊಡವ ಭಾಷೆ ಸಂಸ್ಕøತಿಯನ್ನು ಉಳಿಸಲು 21 ಭಾಷಿಕ ಜನರು ಸಂಘಟಿತರಾಗಬೇಕು ಎಂದರು. ಕೊಡವ ಭಾಷಿಕ ಜನಾಂಗಗಳ ಪ್ರಮುಖರಾದ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಮಾತನಾಡಿ ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಸಲಹೆ ಮಾಡಿದರು. ಪರದಂಡ ಕೆ.ಸುಬ್ರಮಣಿ ಅವರು ಮಾತನಾಡಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು. ಕೊಡವ ನ್ಯಾಷನಲ್ ಕೌನ್ಸಿಲ್ ನಂದಿನೆರವಂಡ ನಾಚಪ್ಪ ಅವರು ಮಾತನಾಡಿ ಕೊಡವ ಭಾಷೆಗೆ ಹಲವು ಶತಮಾನಗಳ ಇತಿಹಾಸವಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿದೆ ಎಂದರು. ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಮಾತನಾಡಿ ಸಮಗ್ರ ವರದಿ ನೀಡುವ ನಿಟ್ಟಿನಲ್ಲಿ ಆಳವಾದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಿದೆ ಎಂದರು. ಡಾ.ತೀತಿರ ರೇಖಾ ವಸಂತ್ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಕೊಡವ ಭಾಷೆ ಮುಂದುವರಿಯುವಂತಾಗಬೇಕು. ಕೊಡವ ಭಾಷೆಯನ್ನು ಮನೆ, ಮನದಲ್ಲಿಯೂ ಬಳಸುವಂತಾಗಬೇಕು ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರುವುದರಿಂದ ಹಲವು ಉಪಯೋಗಗಳಿದ್ದು, ಈ ಬಗ್ಗೆ ಇನ್ನಷ್ಟು ಪ್ರಯತ್ನಗಳು ನಡೆಯಬೇಕು ಎಂದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಮನೆಯಪಂಡ ಎ.ಪೊನ್ನಪ್ಪ ಅವರು ಮಾತನಾಡಿ ವರದಿ ತಯಾರು ಮಾಡುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ಮಾಡಿದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪಂಡ ಸುರೇಶ್ ಚಂಗಪ್ಪ ಮಾತನಾಡಿ ಬೆಂಗಳೂರು ಕೊಡವ ಸಮಾಜದಲ್ಲಿ 15 ಸಾವಿರ ಸದಸ್ಯರಿದ್ದು, ಇವರೆಲ್ಲರ ಪರವಾಗಿ ಕೊಡವ ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವಲ್ಲಿ ತಮ್ಮ ಬೆಂಬಲ ವಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಮುಲ್ಲೆಂಗಡ ರೇವತಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ, ರಾಜು ಬೋಪಯ್ಯ ಇತರರು ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷರಾದ ಬಿ.ಜಿ.ಅನಂತಶಯನ ವಿವಿಧ ಕೊಡವ ಸಮಾಜದ ಅಧ್ಯಕ್ಷರು, ಬರಹಗಾರರು, ಸಾಹಿತಿಗಳು, ಭಾಷಾ ತಜ್ಞರು ಇತರರು ಇದ್ದರು. ಅಕಾಡೆಮಿ ಸದಸ್ಯರಾದ ಸಂಜು ಕಾವೇರಪ್ಪ, ಪಿ.ಕೆ.ಕುಟ್ಟಪ್ಪ, ದಿನು ಬೋಜಪ್ಪ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಶಿವಾಜಿ, ಕುಡಿಯರ ಕಾವೇರಪ್ಪ, ಪೊನ್ನಿರ ಗಗನ್ ಇತರರು ಇದ್ದರು. ನಾಪಂಡ ಗಣೇಶ್ ಸ್ವಾಗತಿಸಿದರು. ಮೊಣ್ಣಂಡ ಶೋಭ ಸುಬ್ಬಯ್ಯ ಪ್ರಾರ್ಥಿಸಿದರು. ಸದಸ್ಯರಾದ ಪುಪ್ಪು ತಿಮ್ಮಯ್ಯ ವಂದಿಸಿದರು.











