ಮಡಿಕೇರಿ NEWS DESK ಜ.5 : ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೊಡವ ಭಾಷೆಗೆ ಭಾರತದ ಸಂವಿಧಾನದಡಿ ಭದ್ರತೆ ಒದಗಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಇಂದು ವಿರಾಜಪೇಟೆಯಲ್ಲಿ ಭೇಟಿಯಾದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ನೇತೃತ್ವದ ನಿಯೋಗ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು. ಈ ಸಂದರ್ಭ ಮಾತನಾಡಿದ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ‘ಕೊಡವ ಭಾಷೆ’ ಮಾತನಾಡುವ 21 ಸಮುದಾಯಗಳ ತಾಯಿ ಭಾಷೆ ಕೊಡವ ಭಾಷೆಯಾಗಿದೆ. ಈ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿದ್ದು, ಕೊಡಗಿನ ಆಡುಭಾಷೆ ಮತ್ತು ವ್ಯವಹರಿಸುವ ಭಾಷೆಯಾಗಿ ಉಳಿದುಕೊಂಡಿದೆ ಎಂದರು. ಆದರೆ 2010 ರಲ್ಲಿ ಯುನೆಸ್ಕೋ ಸಂಸ್ಥೆ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿಯ ಪ್ರಕಾರ ಭಾರತದ 99 ಭಾಷೆಗಳು ಅಳಿವಿನಂಚಿನಲ್ಲಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಾಚೀನ ಭಾಷೆಯಾಗಿರುವ ಕೊಡವ ಭಾಷೆಗೆ ಭಾರತದ ಸಂವಿಧಾನದಡಿ ಭದ್ರತೆ ಒದಗಿಸಲು 8ನೇ ಪರಿಚ್ಛೇದಕ್ಕೆ ಸೇರಿಸುವ ಅಗತ್ಯವಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಗೊAಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದನ್ನು ಮತ್ತಷ್ಟು ತ್ವರಿತಗೊಳಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿಯೋಗದಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟದ ಪ್ರಮುಖರಾದ ಪೊನ್ನಿರ ಗಗನ್ ಉತಯ್ಯ, ಕಣಿಯಂಡ ಪ್ರಕಾಶ್, ಬೀಕಚಂಡ ಬೆಳ್ಳಿಯಪ್ಪ, ಕುಡಿಯರ ಬೋಪಯ್ಯ, ಬಿಲ್ಲರೀಕುಟ್ಟಡ ಪ್ರಭು ಅಯ್ಯಪ್ಪ, ಬಾಳೆಕುಟ್ಟಡ ಉದಯ ಮಾದಪ್ಪ, ಪೆಗ್ಗೋಲಿ ದಿನೇಶ್, ಮುಕ್ಕಾಟಿರ ಹ್ಯಾರಿ ಪೂಣಚ್ಚ, ಮಲ್ಲಂಡ ಮಹೇಶ್, ಮೇದರ ಚಂದ್ರ, ಕೂಡಂಡ ಪೃಥ್ವಿ, ಚವರೆಕುಟ್ಟಡ ಜೀವನ್, ಪೊಟ್ಟಂಡ ಗಣೇಶ್, ಕುಡಿಯರ ತಮ್ಮಯ್ಯ, ಕುಡಿಯರ ಪೊನ್ನಪ್ಪ, ಕುಡಿಯರ ರಮೇಶ್, ಕುಡಿಯರ ಗೌರಿ, ಮೇದರ ಮೀನಾಕ್ಷಿ, ಹಲ್ಚೀರ ದೇವಯ್ಯ, ತಾಪನೇರ ಸಾಬು ಮತ್ತಿತರರು ಹಾಜರಿದ್ದರು.











