ನಾಪೋಕ್ಲು ಜ.6 NEWS DESK : ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಇನ್ನೊಬ್ಬರ ದುಃಖವನ್ನು ಶಮನಗೊಳಿಸುವ ಇನ್ನೊಬ್ಬರ ಜೀವನದಲ್ಲಿ ನಗುವನ್ನು ತರಿಸುವ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಿದೆ ಎಂದು ರೊಟೇರಿಯನ್ ಮಾಜಿ ರಾಜ್ಯಪಾಲ (ಜಿಲ್ಲಾ ಗವರ್ನರ್) ಅಭಿನಂದನ್ ಬಿ.ಶೆಟ್ಟಿ ಹೇಳಿದರು. ಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಸ್ಥಳೀಯ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ರೀಜನ್ ಮೀಟ್ “ಬೆಸುಗೆ” ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಉದ್ದೇಶಗಳನ್ನು ಹೊತ್ತು ಸಂಘಟನೆಯಲ್ಲಿ ಸದಸ್ಯರು ತೊಡಗಿಸಿಕೊಳ್ಳುತ್ತಾರೆ. ಕೆಲವರು ಒಡನಾಟಕ್ಕಾಗಿ ಕೆಲವರು ಸಮಯ ನಿರ್ವಹಣೆಗಾಗಿ ಇನ್ನು ಕೆಲವರು ಸೇವೆಗಾಗಿ ಸಂಘ ಸಂಸ್ಥೆಗಳನ್ನು ಸೇರುತ್ತಾರೆ. ಸೇವೆ ಎಂಬುದು ಲಯನ್ಸ್ ಸಂಸ್ಥೆಯ ದ್ಯೇಯೋದ್ದೇಶ. ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸದ್ದುದ್ದೇಶದೊಂದಿಗೆ ಹಾಗೂ ಸ್ಪೂರ್ತಿಯೊಂದಿಗೆ ಸಾಮಾಜಿಕ ಸೇವೆಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಜಪಾನ್ ದೇಶ ಶತ್ರು ರಾಷ್ಟ್ರಗಳಿಂದ ದಾಳಿಗೊಳಗಾಗಿ ಸಂಕಷ್ಟವನ್ನು ಅನುಭವಿಸಿತು. ಅದೇ ಸೋಲನ್ನು ಸವಾಲಾಗಿ ಸ್ವೀಕರಿಸಿ ಇದೀಗ ಆರ್ಥಿಕವಾಗಿ ಸದೃಢ ದೇಶವಾಗಿದೆ. ಜಪಾನಿನ ನಾಗರಿಕರು ಸದೃಢ ದೇಶ ನಿರ್ಮಾಣದ ಪಣತೊಟ್ಟಿದ್ದಾರೆ. ಉತ್ತಮ ದೂರ ದೃಷ್ಟಿ ಹೊಂದಿದ ನಾಯಕತ್ವ ಗುಣಗಳನ್ನು ಹೊಂದಿದ ನೇತಾರರ ಪ್ರಭಾವದಿಂದಾಗಿ ನಾಗರಿಕರು ದೇಶಾಭಿಮಾನ ಬೆಳೆಸಿಕೊಂಡರು. ಯೋಗ್ಯ ನಾಯಕತ್ವದಿಂದ ದೇಶ ಸದೃಢಗೊಳ್ಳಲಿದೆ. ಲಯನ್ಸ್ ಸಂಸ್ಥೆಯ ದ್ಯೇಯೋದ್ದೇಶಗಳಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಲಯನ್ಸ್ ಕ್ಲಬ್‍ಗಳ ಪ್ರಾಂತೀಯ ಅಧ್ಯಕ್ಷ ಡಾ.ಕೋಟೆರ ಪಂಚಮ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಸಮ್ಮೇಳನ ಮಾಡಲು ಬಹಳಷ್ಟು ಜನರ ಶ್ರಮ ಹಾಗೂ ಸಹಕಾರದಿಂದ ಸಾಧ್ಯವಾಯಿತು. ನಮ್ಮ ಲಯನ್ಸ್ ಕ್ಲಬ್ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಮಂಗಳೂರು ರೆವಿನ್ಯೂ ಜಿಲ್ಲೆಗಳನ್ನು ಹೊಂದಿದೆ. ಅದ್ದೂರಿ ಸಮ್ಮೇಳನವನ್ನು ಆಯೋಜಿಸಲಾದ ಕಾರ್ಯಕ್ರಮದಲ್ಲಿ 12 ಕ್ಲಬ್ ಗಳಸಹಯೋಗದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿಬಂದಿವೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲರ ಸಹಕಾರವನ್ನು ಕೋರಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ 12 ಕ್ಲಬ್‍ಗಳ ಸೇವೆಯನ್ನು ಪರಿಗಣಿಸಿ ನೆನಪಿನ ಕಾಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂತಿಯ ರಾಯಬಾರಿ ಲಯನ್ ನವೀನ್ ಅಂಬೆಕಲ್, ವಲಯ ಅಧ್ಯಕ್ಷರುಗಳಾದ ಲಯನ್ ಬಿಂದ್ಯಾ ಗಣಪತಿ, ಲಯನ್ ಸಿ.ಟಿ.ಅಪ್ಪಣ್ಣ, ಲಯನ್ ನಟರಾಜ ಕೆಸ್ತೂರು, ಪ್ರಾಂತ್ಯ ಅಧ್ಯಕ್ಷರುಗಳು, ಸಮ್ಮೇಳನ ಅಧ್ಯಕ್ಷೆ ಲಯನ್ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಲಯನ್ ಮುಕ್ಕಾಟಿರ ವಿನಯ್, ಖಜಾಂಚಿ ಲಯನ್ ಎಳ್ತ ತಂಡ ಬಿ.ಬೋಪಣ್ಣ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮಾದೆಯಂಡ ಬಿ.ಕುಟ್ಟಪ್ಪ, ಕಾರ್ಯದರ್ಶಿ ಲಯನ್ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಖಜಾಂಚಿ ಲಯನ್ ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಲಿಯೋ ಕ್ಲಬ್ಬಿನ ಅಧ್ಯಕ್ಷ ಬಿ.ಕೆ.ಕನ್ನಿಕ, ಕಾರ್ಯದರ್ಶಿ ಎಂ.ಪಿ.ಧ್ರುವ ದೇವಯ್ಯ, ಖಜಾಂಚಿ ಸಿ.ಅನನ್ಯ ಅಯ್ಯಪ್ಪ, ಪ್ರಾಂತೀಯಕ್ಕೆ ಒಳಪಟ್ಟ 11 ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳ, ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು 12 ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ತಮ್ಮ ಕ್ಲಬ್ಬಿನ ಬ್ಯಾನರ್‍ಗಳೊಂದಿಗೆ ಆಗಮಿಸಿದಾಗ ಅವರನ್ನು ಗೌರವಪೂರ್ಣವಾಗಿ ಬರಮಾಡಿಕೊಳ್ಳಲಾಯಿತು. ರೊಟೇರಿಯನ್ ಮಾಜಿ ರಾಜ್ಯಪಾಲ ಅಭಿನಂದನ್ ಬಿ. ಶೆಟ್ಟಿ ಅವರನ್ನು ಅಂಕುರು ಶಾಲಾ ವಿದ್ಯಾರ್ಥಿಗಳ ಎನ್ ಸಿ ಸಿ ಬ್ಯಾಂಡ್ ಮೇಲಾಗದೊಂದಿಗೆ ಸ್ವಾಗತಿಸಲಾಯಿತು. ಕಾಂಡಂಡ ರೇಖಾ ಪೊನ್ನಣ್ಣ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ರತ್ನ ಚರ್ಮಣ ಸ್ವಾಗತಿಸಿ ಕುಂಚೆಟ್ಟೀರ ರೇಷ್ಮಾ ಉತ್ತಪ್ಪ ನಿರೂಪಿಸಿ ವಿನಯ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.











