ಮಡಿಕೇರಿ ಜ.6 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ.6 ರಿಂದ ಏ.19 ರವರೆಗೆ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿಯನ್ನು ಗೋಣಿಕೊಪ್ಪದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್‍ನ ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪದ ಕಾವೇರಿ ಕಾಲೇಜು ಮೈದಾನದಲ್ಲಿ 14 ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಎಲ್ಲಾ ಕೊಡವ ಭಾಷಿಕ ಜನಾಂಗದವರಿಗೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಮಾತ್ರವಲ್ಲದೆ ಜಿಲ್ಲೆಯ ಹೊರಗೆ ನೆಲೆಸಿರುವ ಕೊಡವರು ಹಾಗೂ ಕೊಡವ ಭಾಷಿಕರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು. ಸೀಸನ್-3ರ ವಿಜೇತರಿಗೆ ಪ್ರಥಮ ರೂ.2 ಲಕ್ಷ, ದ್ವಿತೀಯ 1 ಲಕ್ಷ ಹಾಗೂ ತೃತೀಯ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೇ ಪ್ರತಿ ಪಂದ್ಯಾವಳಿಯಲ್ಲಿ ಮ್ಯಾನ್‍ಆಫ್‍ದಿ ಮ್ಯಾಚ್ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು. ಕಳೆದ ಬಾರಿ 175 ಆಟಗಾರರು ಪಾಲ್ಗೊಂಡಿದ್ದು, ಈ ಬಾರಿ 180ಕ್ಕೂ ಅಧಿಕ ಕ್ರೀಡಾಪಟುಗಳು ಆಡಲಿದ್ದಾರೆ. ಈಗಾಗಲೇ 12 ತಂಡಗಳು ಆಯ್ಕೆಯಾಗಿದ್ದು, ಹಳೆಯ ಹತ್ತು ಹಾಗೂ ಎರಡು ಹೊಸ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯ ಮೂಲಕ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. ಆಟಗಾರರು ಆನ್‍ಲೈನ್ ಮುಖಾಂತರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಲಿಂಕ್‍ನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು. ಪ್ರತಿದಿನ ಎರಡು ಟಿ-20 ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕೊಡಗು, ಮೈಸೂರು, ಮಂಗಳೂರು, ಚೆನ್ನೈ, ಪಾಂಡಿಚೇರಿ ಸೇರಿದಂತೆ ಉತ್ತರ ಭಾರತದ ಪ್ರತಿಷ್ಠಿತ ಆಟಗಾರರು ಕೂಡ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಇರಲಿದೆ. ಹೆಚ್ಚಿನ ಮಾಹಿತಿಗೆ 9945122952, 9686107297 ಸಂಪರ್ಕಿಸಬಹುದಾಗಿದೆ ಎಂದು ಸುನಿಲ್ ಹೇಳಿದರು. ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ ಮಾತನಾಡಿ, ಪಂದ್ಯಾವಳಿಯು ಅಂತರಾಷ್ಟ್ರೀಯ ನಿಯಮಗಳಿಗೆ ಒಳಪಟ್ಟಂತೆ ನಡೆಯಲಿದ್ದು, ಸಮುದಾಯದ ಯುವ ಪ್ರತಿಭೆಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು. ಕಾರ್ಯದರ್ಶಿ ಕೀತಿಯಂಡ ಗಣಪತಿ ಮಾತನಾಡಿ, ಕೊಡಗಿನ ಕ್ರೀಡಾ ಪ್ರತಿಭೆಗಳು ಲೆದರ್ ಬಾಲ್ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಪ್ರತಿಭಾವಂತ ಯುವಕರನ್ನು ಗುರುತಿಸಿ ಅವರಿಗೆ ಕ್ರೀಡೆಯ ಬಗ್ಗೆ ಮಾರ್ಗದರ್ಶನ ನೀಡಿ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು. ಪಂದ್ಯಾವಳಿಯ ನಿರ್ವಾಹಕ ಮಡ್ಲಂಡ ದರ್ಶನ್ ಮಾತನಾಡಿ, ಮೊದಲು ಬರುವ 180 ಆಟಗಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‍ನ ಸಂಚಾಲಕ ಅಣ್ಣಳಮಾಡ ರಾಯ್ ಚಿಣ್ಣಪ್ಪ ಹಾಗೂ ನಿರ್ದೇಶಕರಾದ ಕುಲ್ಲೇಟಿರ ಶಾಂತ ಕಾಳಪ್ಪ ಉಪಸ್ಥಿತರಿದ್ದರು.










