
ಬೆಂಗಳೂರು ಜ.8 NEWS DESK : ಅಂಗಾಂಗ ದಾನ ಕಾರ್ಯದಲ್ಲಿ ಕರ್ನಾಟಕ ರಾಜ್ಯ 2025ನೇ ಸಾಲಿನಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಸಾಧನೆ ರಾಜ್ಯದ ಆರೋಗ್ಯ ವ್ಯವಸ್ಥೆ, ವೈದ್ಯಕೀಯ ತಂಡಗಳ ಸಮರ್ಪಣೆ ಮತ್ತು ಜನಸಾಮಾನ್ಯರ ಮಾನವೀಯ ಸ್ಪಂದನೆಯ ಪ್ರತಿಫಲವಾಗಿದೆ ಎಂದು ಅವರು ಹೇಳಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಕಳೆದ ವರ್ಷ 198 ದಾನಿಗಳಿಂದ ಒಟ್ಟು 564 ಅಂಗಾಂಗಗಳನ್ನು ಕಸಿ ಮಾಡಲಾಗಿದ್ದು, ಇದರ ಮೂಲಕ ನೂರಾರು ರೋಗಿಗಳಿಗೆ ಹೊಸ ಜೀವನ ದೊರಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
2025ರ ಅಂಗಾಂಗ ದಾನದ ಪ್ರಮುಖ ಅಂಕಿ-ಅಂಶಗಳು:
ಒಟ್ಟು ದಾನಿಗಳು: 198
ಕಿಡ್ನಿ ಕಸಿ: 306
ಲಿವರ್ ಕಸಿ: 167
ಹೃದಯ ಕಸಿ: 50
ಶ್ವಾಸಕೋಶ ಕಸಿ: 29
ಕಣ್ಣು (Cornea): 288
ರಾಜ್ಯದಲ್ಲಿ 2016ರಿಂದ ಇಂದಿನವರೆಗೂ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಇದು ಸರ್ಕಾರದ ಜನಜಾಗೃತಿ ಕಾರ್ಯಕ್ರಮಗಳು ಹಾಗೂ ವೈದ್ಯಕೀಯ ಮೂಲಸೌಕರ್ಯದ ಸುಧಾರಣೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.








