ಮಡಿಕೇರಿ, NEWS DESK ಮಾ.3 : ಜಿಲ್ಲೆಯ ಶಾಂತಿ ಸೌಹಾರ್ದತೆಗೆ ದಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಪೋಕ್ಲುವಿನಲ್ಲಿ ಇತ್ತೀಚೆಗೆ ಗೌತಮ್ ಎಂಬ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದು ಶಾಂತಿ ಕದಡುವ ಯತ್ನವಾಗಿದ್ದು, ಹಲ್ಲೆ ಮಾಡಿದವರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ನಾಪೋಕ್ಲು ಭಾಗದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲ್ಲೆ ಪ್ರಕರಣಗಳು ಸಾಮಾನ್ಯವಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯನ್ನು ಬಲಗೊಳಿಸಿ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಮತ್ತು ಗಾಂಜಾ ದಂಧೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೆಲವು ಪ್ರಕರಣಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ ಎಂದು ಮನು ಮುತ್ತಪ್ಪ ಆರೋಪಿಸಿದರು.
ಗ್ರಾ.ಪಂ ಸದಸ್ಯ ಪ್ರದೀಪ್ ಮಾತನಾಡಿ, ಅಹಿತಕರ ಘಟನೆಗಳು ನಡೆದಾಗ ಅಥವಾ ಅನ್ಯಾಯ ಸಂಭವಿಸಿದಾಗ ಪಕ್ಷಾತೀತ ಮತ್ತು ಧರ್ಮಾತೀತವಾಗಿ ಖಂಡಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾರಾಣೆ ಗ್ರಾ.ಪಂ ಅಧ್ಯಕ್ಷ ಕಟ್ಟಿ ಕುಶಾಲಪ್ಪ, ಬಲ್ಲಮಾವಟಿ ಗ್ರಾ.ಪಂ ಸದಸ್ಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಪ್ರಮುಖರಾದ ಶಿವಚಾಳಿಯಂಡ ಜಗದೀಶ್ ಹಾಗೂ ಚಂಗೇಟಿರ ಸೋಮಣ್ಣ ಉಪಸ್ಥಿತರಿದ್ದರು.







