
ಮಡಿಕೇರಿ ಮಾ.27 NEWS DESK : ಪ್ರವಾಸಿಗರ ಕೇಂದ್ರ ಬಿಂದು ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ ವೀಕ್ಷಿಸಿದರು. ಹಾಗೆಯೇ ಗ್ರೇಟರ್ ರಾಜಾಸೀಟು, ಪುಟಾಣಿ ರೈಲು ಮಾರ್ಗ ಮತ್ತು ಕೂರ್ಗ್ ವಿಲೇಜ್‍ಗೆ ತೆರಳಿ ಅಭಿವೃದ್ಧಿ ಸಂಬಂಧ ಮಾಹಿತಿ ಪಡೆದರು. ರಾಜಸೀಟು ಉದ್ಯಾನವನ ಬಳಿಯ ಟಿಕೇಟ್ ಕೌಂಟರ್, ಮಾಹಿತಿ ಕೇಂದ್ರ ಹಾಗೂ ಉದ್ಯಾನವನದೊಳಗೆ ಸಿಸಿಟಿವಿ ಹಾಗೂ ಗೇಟ್ ಅನ್ನು ಪರಿಶೀಲಿಸಿದರು. ಉದ್ಯಾನವನ ಸುತ್ತಲೂ ಸಿಸಿಟಿವಿ ವೈರ್ ಹಾಗೂ ವಿದ್ಯುತ್ ತಂತಿಗಳಿಂದ ಕೂಡಿದ್ದು, ಉದ್ಯಾನವನದ ಸೌಂದರ್ಯ ಹಾಳಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ದುರಸ್ತಿ ಕಾರ್ಯ ಹಾಗೂ ಭೂಮಿಯ ಒಳಭಾಗದಲ್ಲಿ ತಂತಿ ಅಳವಡಿಸುವುದು ಹಾಗೂ ದೀಪಗಳನ್ನು ದುರಸ್ತಿಪಡಿಸಿ ಅಲಂಕಾರಿಕಾ ದೀಪಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ ರಾಜಾಸೀಟು ಬಳಿಯಲ್ಲಿ ಪುಟಾಣಿ ರೈಲು ಆರಂಭಕ್ಕೆ ಅಗತ್ಯ ಕ್ರಮವಹಿಸುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಕೂರ್ಗ್ ವಿಲೇಜ್ ನಲ್ಲಿರುವ ಮಳಿಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ಈ ಮಳಿಗೆ ಪ್ರದೇಶದಲ್ಲಿ ಮಾವು ಮೇಳ, ಫಲಪುಷ್ಪ ಪ್ರದರ್ಶನ ಮತ್ತು ಇತರೆ ಇಲಾಖೆಗಳಲ್ಲಿ ನಡೆಸುವ ಮೇಳಗಳನ್ನು ಆಯೋಜಿಸಲು ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ ಅವರು ರಾಜಾಸೀಟು ಉದ್ಯಾನವನ ಅಭಿವೃದ್ಧಿ, ಗ್ರೇಟರ್ ರಾಜಾಸೀಟು ಬೆಳವಣಿಗೆ ಹಾಗೆಯೇ ಕೂರ್ಗ್ ವಿಲೇಜ್ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು.









