
ವಿರಾಜಪೇಟೆ ಏ.3 NEWS DESK : ವಿರಾಜಪೇಟೆ ನಗರದಲ್ಲಿ ಹನುಮ ಜಯಂತಿ ಪ್ರಯುಕ್ತ ವಿರಾಜಪೇಟೆಯ ಹನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶೋಭಾಯಾತ್ರೆ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಹನುಮ ಭಕ್ತರು ಶೋಭಾಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಾಂಜನೇಯ ದೇವಾಸ್ಥಾನದಲ್ಲಿ ಮಧ್ಯಾಹ್ನ ಪೂಜೆ ನೆರೆವೇರಿದ ಬಳಿಕ ಹನುಮನ ಮೂರ್ತಿ ಹೊತ್ತ ಬೆಳ್ಳಿರಥಕ್ಕೆ ಚಾಲನೆ ದೊರೆಯಿತು. ವಿರಾಜಪೇಟೆಯ ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ ಅವರು, ಪೂಜೆ ಸಲ್ಲಿಸಿ ಈಡುಗಾಯಿ ಹಾಕುವುದರ ಮೂಲಕ ಚಾಲನೆ ನೀಡಿದರು. ವಿವಿಧ ಚಂಡೆ ಮೇಳ ಹಾಗೂ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತ ರಥದ ವಾಹನದೊಂದಿಗೆ ಮೆರವಣಿಗೆ ಮೂಲಕ ನಗರದ ಛತ್ರಕೆರೆ ಸಮೀಪವಿರುವ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವೀರಾಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ಸಾಗಿ ಬಂದು ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದ ಬಳಿ ಸಂಗಮಗೊಂಡಿತು. ಅಪಾರ ಜನಸ್ತೋಮದೊಂದಿಗೆ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಕಲಾಮೇಳದೊಂದಿಗೆ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಂಡಿತು. ಪಟ್ಟಣದ ತೆಲುಗರ ಬೀದಿ ಮೂಲಕ ದೊಡ್ದಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ಸು ನಿಲ್ದಾಣ, ಮಟನ್ ಮಾರ್ಕೆಟ್, ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದ ಮೂಲಕ ದೊಡ್ದಟ್ಟಿ ಚೌಕಿ, ಗಡಿಯಾರ ಕಂಬ, ಕಾರು ನಿಲ್ದಾಣದ ಮೂಲಕ ಶೋಭಯಾತ್ರೆ ಸಾಗಿ ಬಂದು ತಾಲೂಕು ಮೈದಾನದಲ್ಲಿ ಸಂಗಮವಾಯಿತು. ನಗರದುದ್ದಕ್ಕೂ ಓಂ, ಹನುಮ, ರಾಮ ಭಾವಚಿತ್ರದ ಕೇಸರಿ ಧ್ವಜಗಳು ರಾರಾಜಿಸಿದವು. ಕೇಸರಿ ಮಾಲೆ, ಪೇಟ ಹಾಕಿದ್ದ ಬಹುತೇಕರು ಕೈಯಲ್ಲಿ ಭಗವಾಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಗೊಂಬೆ ಕುಣಿತ, ಡೊಳ್ಳು, ಚಂಡೆ ಮೇಳ, ನಾಸಿಕ್ ಬ್ಯಾಂಡ್ ಕೊಡಗಿನ ವಾಲಗ, ನಾಟ್ಯ ಮಯೂರಿ ಹಾಗೂ ನಾಟ್ಯಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕುಣಿತ, ಆದಿವಾಸಿಗಳ ನೃತ್ಯ, ಸೇರಿ ನಾಡಿನ ಅನೇಕ ಜನಪದ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ತಂದವು. ಅಲಂಕೃತ ಆಂಜನೇಯ ಮೂರ್ತಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮಹಿಳೆಯರು, ಪುರುಷರು, ಮಕ್ಕಳು ಡಿಜೆಗೆ ಕುಣಿದು ಕುಪ್ಪಳಿಸಿದರು. ರಸ್ತೆ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೇರಿ ಸಾರ್ವಜನಿಕರು ಶೋಭಾಯಾತ್ರೆ ವೀಕ್ಷಿಸಿದರು. ರಾಮ ಹಾಗೂ ಹನುಮನ ವಿವಿಧ ಕಥಾ ಸಾರಾಂಶಗಳನ್ನು ಒಳಗೊಂಡ ಸ್ಥಭ್ದಚಿತ್ರ ಅತ್ಯಂತ ಆಕರ್ಷಕವಾಗಿತ್ತು. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾರ್ಗದರ್ಶನದಲ್ಲಿ, ವಿರಾಜಪೇಟೆ ಡಿವೈಎಸ್‍ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಾಂತಿ ಸುವ್ಯವಸ್ಥೆಗೆ ಖಾಕಿಯ ಭದ್ರ ಕೋಟೆಯೇ ಇತ್ತು. ಕೇಸರಿ ಶಾಲು ಹಾಕಿಕೊಂಡು, ಕೈಯಲ್ಲಿ ಹನುಮ ಧ್ವಜ ಹಿಡಿದ ಭಕ್ತರು, ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಹನುಮಾನ್ ಕೀ ಜೈ ಎಂದು ಘೋಷಣೆ ಕೂಗುತ್ತಾ, ವಾದ್ಯ, ತಮಾಟೆ, ನಗರಿ ಸದ್ದಿಗೆ ಕುಣಿದು ಕುಪ್ಪಳಿಸಿದರು. :: ಉತ್ಸವ ಮೂರ್ತಿಗೆ ಪೂಜೆ :: ಮೆರವಣಿಗೆ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದರು. ಮಹಡಿ ಮೇಲೆ ನಿಂತು ಪಟ್ಟಣದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಹನುಮನಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹನುಮ ಜಯಂತಿ ಆಯೋಜನ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ಉಪಾಧ್ಯಕ್ಷರಾದ ಶಾನ್ ಚಂಗಪ್ಪ, ಬಿ.ವಿ. ಹೇಮಂತ್, ಸಾಮಾಜಿಕ ಜಾಲತಾಣದ ಶಿನೋಜ್ ಟಿ.ಕೆ. ಕಾರ್ಯದರ್ಶಿ ಕೂತಂಡ ಸಚಿನ್, ಜಂಟಿ ಕಾರ್ಯದರ್ಶಿ ಪ್ರದೀಪ್ ರೈ, ಸುಮೇಶ್, ಖಜಾಂಚಿ ಸುರೇಶ್ ಚಾಮಿ, ಸಹ ಖಜಾಂಚಿ ಶಶಿ ಚಾಮಿ, ಸಾಂಸ್ಕøತಿಕ ಕಾರ್ಯಕ್ರಮ ಉಸ್ತುವಾರಿ ಚೇತನ್ ಶಿವಪ್ಪ ಹಾಗೂ ವಿವೇಕ್ ರೈ, ಲಷ್ಮಿಷಾ, ಅನ್ನ ಸಂತರ್ಪಣಾ ಉಸ್ತುವಾರಿಗಳಾದ ಸುನಿಲ್, ಉಣ್ಣಿ,ಸಂತೋಷ್, ಈಶ್ವರ್, ಸಂಜು, ಸಜೀವ, ಸಮಿತಿಯ ಕಾನೂನು ಸಲಹೆಗಾರರಾದ ಪುಲಿಯಂಡ ಪೊನ್ನಣ್ಣ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಹಿಂದೂ ಭಾಂದವರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.









