
ಮಡಿಕೇರಿ NEWS DESK ಏ.8 : ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸಾಲು ಸಾಲು ಸಾವುಗಳಾಗುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲವೆಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಕ್ಷಿಣ ಕೊಡಗಿನ ಕಾಯಿಮಾನಿಯಲ್ಲಿ ಮೂಕಳಮಾಡ ರತ್ತು ಅವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದು, ಇದು ಅರಣ್ಯ ಇಲಾಖೆಯ ನಿರ್ಲಕ್ಷö್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಅರಣ್ಯ ಸಚಿವರು ಸಂತಾಪ ಸೂಚಿಸಿ ಸುಮ್ಮನಾದರೆ ಸಾಲದು, ಕೊಡಗು ಜಿಲ್ಲೆಗೆ ಬಂದು ಇಲ್ಲಿ ನಡೆಯುತ್ತಿರುವ ವನ್ಯಜೀವಿ ಮತ್ತು ಮಾನವ ಸಂಘರ್ಷದ ಕುರಿತು ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಮೂರೂವರೆ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಕಾಡಾನೆಯಿಂದ 6ಕ್ಕೂ ಹೆಚ್ಚು ಸಾವುಗಳಾಗಿದ್ದರೂ ಅರಣ್ಯ ಸಚಿವರು ಇತ್ತ ಮುಖ ಮಾಡಿಲ್ಲ, ನೊಂದವರ ಅಹವಾಲು ಸ್ವೀಕರಿಸಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಶಾಸಕರುಗಳು ಕಾಡಾನೆ ದಾಳಿಯ ಗಂಭೀರತೆಯನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಮತ್ತು ಸಚಿವರನ್ನು ಕರೆ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದ ತಕ್ಷಣ ಹೋದ ಜೀವ ಮರಳಿ ಬರಲು ಸಾಧ್ಯವಿಲ್ಲ. ಮಾನವೀಯತೆ ಇರುವ ಜನಪ್ರತಿನಿಧಿಗಳು ವನ್ಯಜೀವಿಗಳ ದಾಳಿಯ ಸಮಸ್ಯೆಗೆ ಶಾಶ್ವತ ಪರಿಹಾರ ಘೋಷಿಸಬೇಕೆ ಹೊರತು ಹಿಂದಿನ ಸರಕಾರದ ಮೇಲೆ ಅಥವಾ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಈಗಿನ ಕಾಂಗ್ರೆಸ್ ಸರಕಾರ ಕಾಡಾನೆ ಉಪಟಳ ತಡೆಗೆ ಮುಂದಿನ ಐದು ವರ್ಷಗಳ ಯೋಜನೆ ರೂಪಿಸಿರುವುದು ಹಾಸ್ಯಾಸ್ಪದವಾಗಿದೆ. ಈ ಅವಧಿಯಲ್ಲಿ ಪ್ರಾಣ ಮತ್ತು ಕೃಷಿ ಫಸಲು ಕಳೆದುಕೊಳ್ಳುವವರಿಗೆ ಹೊಣೆ ಯಾರು ಎಂದು ಶಿವಕುಮಾರ್ ನಾಣಯ್ಯ ಪ್ರಶ್ನಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಇಷ್ಟೆಲ್ಲಾ ವನ್ಯಜೀವಿಗಳ ದಾಳಿಯಾಗುತ್ತಿದ್ದರೂ ರಾಜ್ಯ ಸರಕಾರ ಅಧ್ಯಯನ ತಂಡವನ್ನು ಕಳುಹಿಸಿಲ್ಲ. ಅರಣ್ಯ ಅಧಿಕಾರಿಗಳ ಮೇಲೆ ಅರಣ್ಯ ಸಚಿವರು ಹಿಡಿತ ಸಾಧಿಸುತ್ತಿಲ್ಲ. ಕೇವಲ ಜನಸಾಮಾನ್ಯರ ಮೇಲೆ ಇಲ್ಲಸಲ್ಲದ ಕಾನೂನು ಹೇರಿ ಕಿರುಕುಳ ನೀಡುವುದಕ್ಕಷ್ಟೇ ಅರಣ್ಯ ಇಲಾಖೆ ಸೀಮಿತವಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಕಾಡಾನೆ ಹಾವಳಿ ವಿರುದ್ಧ ಜನಪರವಾಗಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದನ್ನು ಟೀಕಿಸಿರುವ ಶಾಸಕರು, ಮೊದಲು ಅರಣ್ಯ ಸಚಿವರನ್ನು ಕೊಡಗು ಜಿಲ್ಲೆಗೆ ಕರೆ ತಂದು ಜನಸಂಪರ್ಕ ಸಭೆ ನಡೆಸಲಿ ಎಂದು ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ.








