
ಮಡಿಕೇರಿ NEWS DESK ಏ.11 : ಮಹಿಳಾ ಸಬಲೀಕರಣದ ಉದ್ದೇಶ ನೈಜವಾಗಿದ್ದರೆ ಲೋಕಸಭೆ ಕ್ಷೇತ್ರ ಹೆಚ್ಚಳ ಮಾಡದೇ ಈಗ ಇರುವ ಚೌಕಟ್ಟಿನೊಳಗೆ ಮಹಿಳಾ ಮೀಸಲಾತಿ ನೀಡಬೇಕು ಮತ್ತು ಕೊಡಗಿನ ವಿಧಾನಸಭಾ ಕ್ಷೇತ್ರಗಳನ್ನು 5ಕ್ಕೆ ಏರಿಕೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಷು ಮೀಸಲು ಕಲ್ಪಿಸುವ ಉದ್ದೇಶ ಒಳ್ಳೆಯದು. ಆದರೆ ಮಹಿಳಾ ಮೀಸಲು ವಿಧೇಯಕ ಕೇವಲ ಸುಧಾರಣೆಯಲ್ಲ, ಆಡಳಿತ ವ್ಯವಸ್ಥೆಯ ಪುನರ್ ರಚನೆಯ ದಾರಿಯಾಗಬೇಕು. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಪಡೆಯಿತು. ಈಗ ಇರುವ 543 ಕ್ಷೇತ್ರವನ್ನು ಶೇಕಡಾ 50ರಷ್ಟು ಹೆಚ್ಚು ಮಾಡಿ 816ಕ್ಕೆ ಏರಿಸಿ ಅದರಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡಲು ಕಾನೂನು ತಿದ್ದುಪಡಿ ತರುತ್ತಿರುವ ಕೇಂದ್ರ ಸರಕಾರದ ನಡೆ ಗೊಂದಲಕ್ಕೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ. 1971ರ ಅಥವಾ 2027ರ ಜನಸಂಖ್ಯೆ ಆಧಾರದಲ್ಲಿ ಕಾನೂನು ಜಾರಿಗೆ ತರುವ ಕುರಿತು ಸರಕಾರ ಜನತೆಗೆ ಬಹಿರಂಗಪಡಿಸಬೇಕು. ಈಗಷ್ಟೇ ಬಜೆಟ್ ಅಧಿವೇಶನ ಮುಗಿದಿದೆ, ಮತ್ತೆ ದಿಢೀರ್ ಆಗಿ ವಿಶೇಷ ಸಂಸತ್ ಅಧಿವೇಶನ ಕರೆದು ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. *ಕೊಡಗಿಗೆ ನ್ಯಾಯ* ಕ್ಷೇತ್ರ ಪುನರ್ ವಿಂಗಡಣೆ ಪಾರದರ್ಶಕವಾಗಿ ನಡೆಯಬೇಕು. ಪುಟ್ಟ ಜಿಲ್ಲೆ ಕೊಡಗು ಜನಸಂಖ್ಯೆ ಸ್ಫೋಟವಾಗದಂತೆ ಸಾಮಾಜಿಕ ಕಳಕಳಿ ಮೆರೆದು ಪ್ರಾಮಾಣಿಕವಾಗಿ ನಡೆದುಕೊಂಡಿದೆ. ಈ ಪ್ರದೇಶಕ್ಕೆ ಅನ್ಯಾಯವಾಗದಂತೆ ಪುನರ್ ವಿಂಗಡಣೆ ಸಂದರ್ಭ ಎಚ್ಚರ ವಹಿಸಬೇಕು. ಕೊಡಗು ಜಿಲ್ಲೆ ಕಳೆದ ಅನೇಕ ವರ್ಷಗಳಿಂದ ಸಂಸತ್ ಸದಸ್ಯತ್ವದಿಂದ ವಂಚಿತವಾಗಿದೆ. ಈಗ ಇರುವ ವಿಧಾನಸಭೆ ಕ್ಷೇತ್ರವನ್ನು ಎರಡರಿಂದ ಐದಕ್ಕೆ ಏರಿಕೆ ಮಾಡಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.








