
ಮಡಿಕೇರಿ ಏ.18 NEWS DESK : ಕೊಡಗು ಜಿಲ್ಲಾ ಮೊಗೇರ ಸಮಾಜ ಸೇವಾ ಸಂಘದಿಂದ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲಿ ಆಯೋಜಿತ ಎರಡು ದಿನಗಳ 10ನೇ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”ಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಮಡಿಕೇರಿ ನಗರಸಭಾ ಅಧ್ಯಕ್ಷರಾದ ಪಿ.ಕಲಾವತಿ ಅವರು ಜ್ಯೋತಿ ಬೆಳಗುವ ಮೂಲಕ ಮೊಗೇರ ಕ್ರೀಡಾಕೂಟ ಸಮಾರಂಭಕ್ಕೆ ಚಾಲನೆಯನ್ನಿತ್ತು ಮಾತನಾಡಿ, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮೊಗೇರ ಸಮಾಜ ಬಾಂಧವರು ಕ್ರೀಡಾಕೂಟದ ಹಿನ್ನೆಲೆ ಒಂದೆಡೆ ಸಮಾವೇಶಗೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು. ಕೊಡಗು ಜಿಲ್ಲಾ ಮೊಗೇರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪಿ.ಬಿ.ಜನಾರ್ಧನ್ ಮಾತನಾಡಿ, ಕಳೆದ ಒಂದು ದಶಕದಿಂದ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿನ ಮೊಗೇರ ಸಮಾಜ ಬಾಂಧವರನ್ನು ಒಗ್ಗೂಡಿಸುವ, ಆ ಮುಖೇನ ಸಮಾಜದ ಸಂಘಟನೆಯನ್ನು ಬಲಪಡಿಸುವ ಪ್ರಯತ್ನವಾಗಿ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ನಮ್ಮೆಲ್ಲ ಪ್ರಯತ್ನಗಳಿಂದ ಸಂಘಟನೆ ಸದೃಢವಾಗಿ ಬೆಳೆಯುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಈ ಕ್ರೀಡಾಕೂಟದಲ್ಲಿ ಕೊಡಗನ್ನು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮೊಗೇರ ಬಾಂಧವರು ಪಾಲ್ಗೊಂಡಿದ್ದಾರೆ. ಸಮುದಾಯದ ಸೌಹಾರ್ದ ಸಮ್ಮಿಲನ, ಸಂಘಟನೆ, ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕಾಗಿ ನಡೆಸುತ್ತಿರುವ ಕ್ರೀಡಾಕೂಟಕ್ಕೆ ಸರಕಾರ ಅಗತ್ಯ ನೆರವನ್ನು ನೀಡಬೇಕೆಂದು ಮನವಿ ಮಾಡಿಕೊಂಡರು. ಸಮಾಜದ ಕ್ರೀಡಾಧ್ಯಕ್ಷರಾದ ಚಂದ್ರ ಎಂ.ಜಿ. ಮಾತನಾಡಿ, ಎರಡು ದಿನಗಳ ಕಾಲ ಕ್ರಿಕೆಟ್ ಸೇರಿದಂತೆ ವೈವಿಧ್ಯಮಯವಾದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿ, ಕ್ರೀಡಾ ಕೂಟದ ಯಶಸ್ಸಿಗೆ ಕೈಜೋಡಿಸಿರುವ ಸರ್ವರಿಗು ಕೃತಜ್ಞತೆಗಳನ್ನು ಸಲ್ಲಿಸಿದರು. :: ಕ್ರೀಡಾ ಧ್ವಜಾರೋಹಣ :: ಮೊಗೇರ ಸಮಾಜ ಸೇವಾ ಸಂಘದ ಲಾಂಛನವನ್ನು ಹೊಂದಿದ ಕ್ರೀಡಾ ಧ್ವಜವನ್ನು ಸಮಾಜದ ಪದಾಧಿಕಾರಿಗಳು ಆರೋಹಣ ಮಾಡುವುದರೊಂದಿಗೆ ಕ್ರೀಡಾಕೂಟ ಅಧಿಕೃತವಾಗಿ ಆರಂಭಗೊಂಡಿತು. ಸಮಾರಂಭದಲ್ಲಿ ಕೊಡಗು ಜಿಲ್ಲಾ ಮೊಗೇರ ಸಮಾಜ ಸೇವಾ ಸಮಾಜದ ಸಲಹೆಗಾರರಾದ ಪಿ.ಎಂ.ರವಿ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಎಂ.ದಾಮೋದರ್, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಪಿ.ಸಿ.ರಘ, ಸೋಮವಾರಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ರಾಮಚಂದ್ರ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ರಾಮು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಮಾನಿ ಹೆಬ್ಬೆಟ್ಟಗೇರಿ ಪ್ರಾರ್ಥಿಸಿದರು, ಕ್ರೀಡಾ ಕಾರ್ಯದರ್ಶಿ ಪಿ.ಸಿ.ರಮೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. :: ಬಿರಿಬಿಸಿಲ ನಡುವೆ ತುರುಸಿನ ಪೈಪೋಟಿ :: ಬೆಳಗ್ಗಿನ ಬಿರುಬಿಸಿಲ ವಾತಾವರಣದ ನಡುವೆ ಮೊಗೇರ ಕ್ರೀಡಾ ಕೂಟದ ಭಾಗವಾಗಿ ವಿವಿಧ ತಂಡಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಗಳು ಕುತೂಹಲಕಾರಿಯಾಗಿ ನಡೆಯಿತು. ಪಂದ್ಯಾವಳಿಯಲ್ಲಿ ಕೊಡಗು ಸೇರಿದಮತೆ ವಿವಿಧ ಜಿಲ್ಲೆಗಳ ಒಟ್ಟು 34 ತಂಡಗಳು ಪಾಲ್ಗೊಂಡಿವೆ. :: ಭಾನುವಾರದಂದು ವಿವಿಧ ಸ್ಪರ್ಧೆಗಳು :: ಕ್ರಿಕೆಟ್‍ನೊಂದಿಗೆ ಏ.19ರ ಭಾನುವಾರದಂದು ವಾಲಿಬಾಲ್, ಮಹಿಳೆÉಯರ ಥ್ರೋಬಾಲ್, ಪುರುಷರ ಹಗ್ಗಜಗ್ಗಾಟ, ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ಸಮಾಜ ಬಾಂಧವರಿಂದ ಭರತನಾಟ್ಯ, ನಾಟಕ, ಏಕಪಾತ್ರಾಭಿನಯ, ಜಾನಪದ ಗೀತೆ ಗಾಯನ, ಮಿಮಿಕ್ರಿ, ಗ್ರೂಪ್ ಡ್ಯಾನ್ಸ್, ಛದ್ಮವೇಷ, ಜಾನಪದ ನೃತ್ಯ, ಸಿನಿಮಾ ಹಾಡುಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆಯೆಂದು ಸಮಾಜದ ಸಲಹೆಗಾರರಾದ ಪಿ.ಎಂ. ರವಿ ಅವರು ತಿಳಿಸಿದ್ದಾರೆ.









