
ಮಡಿಕೇರಿ NEWS DESK ಏ.21 : ಜಾತ್ಯಾತೀತ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಮುಸಲ್ಮಾನರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿದ ಪರಿಣಾಮ ಅದು ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರಕಾರ ಮುಸ್ಲಿಮರ ದಮನಕ್ಕೆ ಮುಂದಾಗಿದೆ ಎಂದು ಸುನ್ನಿ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಅವರು ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಮಸ್ಲಿಮರನ್ನು ಕಡೆಗಣಿಸುತ್ತಿದ್ದು, ಈ ಬೆಳವಣಿಗೆ ಅತ್ಯಂತ ನೋವನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕೊಡಗು ಜಿಲ್ಲೆಯ ಪ್ರಮುಖ ಮುಸ್ಲಿಂ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್, ಎಸ್‌ಎಸ್‌ಎಫ್, ಮುಸ್ಲಿಂ ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತವೆ. ಮುಸ್ಲಿಮರು ನೀಡಿರುವ ಒಗ್ಗಟ್ಟಿನ ಬೆಂಬಲದಿoದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಆದರೆ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ನೇಮಕಾತಿಗಳಲ್ಲಿ ಹಾಗೂ ಅಧಿಕಾರಶಾಹಿಯ ಪ್ರಮುಖ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಮತ್ತೆ ಮುಸ್ಲಿಂ ಸಮುದಾಯವನ್ನು ಅವಮಾನಿಸುತ್ತಿದೆ ಎಂಬ ನೋವಿನ ಭಾವನೆ ಸಮುದಾಯದಲ್ಲಿ ತೀವ್ರವಾಗುತ್ತಿದೆ. ದಾವಣಗೆರೆ ಉಪ ಚುನಾವಣೆ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶ ನೀಡಿದಂತಿದೆ. ಅದೇನೆಂದರೆ, “ನೀವು ನಮಗೆ ಒಂದು ವೋಟ್ ಬ್ಯಾಂಕ್ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕುವುದು ಮಾತ್ರ ನಿಮ್ಮ ಕೆಲಸ. ಪಕ್ಷದಲ್ಲಿ ಹುದ್ದೆ, ಸ್ಥಾನಮಾನ, ಪ್ರಾತಿನಿಧ್ಯ, ಅವಕಾಶ ನಾವು ನೀಡುವ ಭಿಕ್ಷೆ. ಒಂದೊಮ್ಮೆ ನಿಮ್ಮ ಹಕ್ಕು ಅಥವಾ ನಿಮಗಾದ ಅನ್ಯಾಯದ ಕುರಿತು ಪ್ರಶ್ನೆ ಕೇಳಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು.” ಎನ್ನುವಂತ್ತಾಗಿದೆ.
ಕಾAಗ್ರೆಸ್ ನ ಈ ಪಕ್ಷಪಾತಿ ಧೋರಣೆಯನ್ನು ಕೊಡಗು ಜಿಲ್ಲೆಯ ಮುಸ್ಲಿಂ ಸಮುದಾಯ ಇನ್ನು ಮುಂದೆ ಸಹಿಸುವುದಿಲ್ಲ. ಮುಸ್ಲಿಂ ಸಮುದಾಯದ ಕೆಲ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಟಕಟೆಯಲ್ಲಿ ನಿಲ್ಲಿಸಿ, ಶಿಸ್ತಿನ ಪಾಠ ಹೇಳುತ್ತಿರುವ ಕಾಂಗ್ರೆಸ್ ಪಕ್ಷ, ಈ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಪಕ್ಷದಿಂದ ತಗೆದುಕೊಳ್ಳಲಾದ ಶಿಸ್ತು ಕ್ರಮಗಳೇನು ಎಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ, ಪಕ್ಷದ ಶಿಸ್ತು ನಿಯಮಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ, ಇಡೀ ಮುಸ್ಲಿಂ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ. ಮುಸ್ಲಿಮರು ಪ್ರಾತಿನಿಧ್ಯ ಕೇಳಿದ್ದೇ ತಪ್ಪು ಎಂಬoತೆ ಕಾಂಗ್ರೆಸ್ ನಲ್ಲಿ ಬಿಂಬಿಸಲಾಗುತ್ತಿದೆ. ನ್ಯಾಯಯುತವಾಗಿ ನೀಡಲೇಬೇಕಿದ್ದ ಟಿಕೆಟ್ ನೀಡದೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೇಳಿ, ನಂತರ ಕ್ಷುಲ್ಲಕ ಕಾರಣಗಳನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವಲ್ಲ.
“ನೀವು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು” ಎಂಬ ಕಾಂಗ್ರೆಸ್ ಪಕ್ಷದ ಈ ಧೋರಣೆ ತೀವ್ರ ಖಂಡನೀಯವಾಗಿದೆ. ಸಾಲದ್ದಕ್ಕೆ ಪಕ್ಷದಲ್ಲಿರುವ ಸಮುದಾಯದ ನಾಯಕರನ್ನೇ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂಬ ಅನುಮಾನವೂ ಕಾಡುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಕೆಲವು ಮುಖಂಡರೂ ತಮ್ಮ ಸಮುದಾಯದ ಜೊತೆಗಿನ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸದೆ, ಸಮುದಾಯದ ಪರವಾಗಿ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತಿದ ನಾಯಕರ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲದೆ ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗಿರುವ ನಡೆ ಖಂಡನೀಯ ಎಂದು ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ತಿಳಿಸಿದರು. ಕೆಲವು ಸಮುದಾಯಗಳ ನಾಯಕರು ಎಷ್ಟು ದೊಡ್ಡ ಪ್ರಮಾದ ಮಾಡಿದರೂ ಯಾವುದೇ ಕ್ರಮವಿಲ್ಲ, ನೇರವಾಗಿ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಅವರಿಗೆ ಶಿಸ್ತು ಕ್ರಮದ ಬದಲಿಗೆ ಬಹುಮಾನ, ಇನ್ನಷ್ಟು ಗೌರವ ಸಿಗುತ್ತಿದೆ. ಆದರೆ ಒಂದು ನಿರ್ದಿಷ್ಟ ಸಮುದಾಯದ ನಾಯಕರು ಪಕ್ಷದ ಫರ್ಮಾನು ಪಾಲಿಸುವಲ್ಲಿ ಒಂದಿಷ್ಟು ಹೆಚ್ಚು ಕಡಿಮೆಯಾದರೂ ಅವರ ತಲೆದಂಡವಾಗುತ್ತಿದೆ. ಈ ರೀತಿಯ ತಾರತಮ್ಯದ ನಡೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ. ರಾಜಕೀಯ ಹಿನ್ನಡೆಗೆ ಪಕ್ಷದ ಈ ರೀತಿಯ ನಿರ್ಧಾರಗಳೇ ಕಾರಣವಾಗಬಹುದು. ರಾಜ್ಯದಲ್ಲಿ ಸಂವಿಧಾನದ ಮೌಲ್ಯಗಳ ಪ್ರಕಾರ ನಡೆಯುವ ಜಾತ್ಯಾತೀತ ಸರಕಾರ ಬರಬೇಕು, ಜನರನ್ನು ವಿಭಜಿಸುವ ಕೋಮುವಾದಿಗಳಿಗೆ ಅಧಿಕಾರ ಸಿಗಬಾರದು ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿ ಮತ ನೀಡಿದ್ದಾರೆ. ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಹಾಗೂ ಅವುಗಳನ್ನು ಬಲಪಡಿಸಲು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ ಅದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ ಎಂದು ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಅಭಿಪ್ರಾಯಪಟ್ಟರು. ಸಿಎಂ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮ್ಮದ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಬ್ಬರ್ ಖಾನ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ. ಇದೀಗ ಸಚಿವ ಜಮೀರ್ ಅಹಮ್ಮದ್ ಅವರ ಮೇಲೆ ಕೂಡ ತೂಗುಗತ್ತಿ ಇದೆ, ರಾಜಕೀಯ ಲೆಕ್ಕಾಚಾರದ ಹೆಸರಿನಲ್ಲಿ ಒಂದು ಸಮುದಾಯ ಮತ್ತು ಅದರ ನಾಯಕರನ್ನು ಈ ರೀತಿ ನಡೆಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು ಮತ್ತು ಮಸ್ಲಿಂ ನಾಯಕರ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
*ಕೊಡಗಿನಲ್ಲೂ ಪ್ರಾತಿನಿಧ್ಯ ನೀಡಿ*
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಮುಸಲ್ಮಾನರು ನಿರ್ಣಾಯಕ ಪಾತ್ರ ವಹಿಸಿದ್ದಾರೆ, ಶೇ.95ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಮುಸ್ಲಿಂ ಮುಖಂಡರಿಗೆ ಯಾವುದೇ ಅಧಿಕಾರ ನೀಡದೆ ಕಡೆಗಣಿಸಲಾಗಿದೆ. ನಮ್ಮ ಬೇಡಿಕೆಗಳ ಬಗ್ಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಮಂದಿನ ದಿನಗಳಲ್ಲಿ ಮುಸ್ಲಿಮರಿಗೆ ಅಧಿಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಅಬ್ದುಲ್ ಹಫೀಳ್ ಸಹದಿ ಅವರು ಮಾತನಾಡಿ ಕಾಂಗ್ರೆಸ್ ನಡೆಯನ್ನು ರಾಜ್ಯವ್ಯಾಪಿ ಉಲಾಮಗಳು ಒಗ್ಗಟ್ಟನಿಂದ ವಿರೋಧಿಸಿದ್ದೇವೆ. ನಮ್ಮ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮುಸಲ್ಮಾನರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವೈ.ಎಂ.ಉಮ್ಮರ್ ಫೈಜಿ಼, ಸದಸ್ಯರುಗಳಾದ ಎನ್.ಎನ್.ಇಕ್ಬಾಲ್ ಮೌಲವಿ, ಅಬ್ದುಲ್ ಹಮೀದ್ ಮದನಿ ಹಾಗೂ ಮಡಿಕೇರಿಯ ಮಕ್ಕಾ ಮಸೀದಿಯ ಮೌಲಾನಾ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.









