
ಮಡಿಕೇರಿ ಮಾ.21 NEWS DESK : ಕೊಡಗಿನಲ್ಲಿ ಕೃಷಿ, ಕಾಫಿ, ಏಲಕ್ಕಿ, ಕಾಳು ಮೆಣಸು ಸೇರಿದಂತೆ ಪ್ರಮುಖ ಕೖಷಿ ಇಂದು ತೀವ್ರ ಸಂಕಷ್ಟದಲ್ಲಿದ್ದು, ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮದ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ಹಲವಾರು ಅವಕಾಶಗಳಿವೆ ಎಂದು ಬ್ಯಾಂಕಿಂಗ್, ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತು ವೃತ್ತಿ ಮಾಗ೯ದಶ೯ಕ, ಆರ್.ಕೆ.ಬಾಲಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಪತ್ರರ‍್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಮಂಗಳವಾರ ಕುಶಾಲನಗರ ಗೌಡ ಸಮಾಜದಲ್ಲಿ ಆಯೋಜಿಸಿದ್ದ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಕರ‍್ಯಕ್ರಮದಲ್ಲಿ ಅವರು ‘ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ-ಹಲವು ಆಯಾಮಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೊಡಗಿನಲ್ಲಿ ಸುಮಾರು 1.05 ಲಕ್ಷ ಹೆಕ್ಟೇರ್ ಕಾಫಿ ತೋಟವಿದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯ ಸುಮಾರು ಶೇ.30ರಷ್ಟು ಇಲ್ಲೇ ಬೆಳೆಯುತ್ತದೆ. ಆದರೆ ಕಳೆದ ಎರಡು ದಶಕಗಳಲ್ಲಿ ಕಾಫಿ ಬೆಲೆಯ ಏರಿಳಿತ, ಹವಾಮಾನ ಬದಲಾವಣೆ, ಕೂಲಿ ಕರ‍್ಮಿಕರ ಕೊರತೆ, ಕಾಡಾನೆ ಹಾವಳಿ ಇವೆಲ್ಲ ರೈತರ ನಿದ್ದೆ ಕೆಡಿಸಿವೆ. 2018ರ ಭೀಕರ ಪ್ರವಾಹ ಮತ್ತು ಭೂಕುಸಿತ ಕೊಡಗಿನ ಕೃಷಿಕರನ್ನು ಹೈರಾಣಾಗಿಸಿದೆ. ಇದರಿಂದಾಗಿ ಯುವ ತಲೆಮಾರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ತೋಟ ಉಳಿಸಿಕೊಳ್ಳಲು ದಾರಿ ಕಾಣದೆ ಕಾಫಿ ಬೆಳೆಗಾರರ ಮಕ್ಕಳು ಬೆಂಗಳೂರಿನಲ್ಲಿ ಕಾಫಿ ಮಾರುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಅವರು ಹೇಳಿದರು. ಆದರೆ ಕೊಡಗಿನ ರೈತರು ಮನಸ್ಸು ಮಾಡಿದರೆ ಕೃಷಿ ಪ್ರವಾಸೋದ್ಯಮದ ಮೂಲಕ ಬೆಂಗಳೂರಿಗರೇ ಇಲ್ಲಿನ ರೈತರ ಬಳಿ ಬರುವಂತೆ ಮಾಡಬಹುದು ಎಂದು ನುಡಿದರು. ಕೃಷಿ ಪ್ರವಾಸೋದ್ಯಮ ಎಂಬುದು ಒಂದು ದಾಶ೯ನಿಕ ಕಲ್ಪನೆ.ಯಾಗಿದೆ. ಸರಳವಾಗಿ ಹೇಳಬೇಕೆಂದರೆ ಕೃಷಿ ಚಟುವಟಿಕೆಗಳಲ್ಲಿ ಪ್ರವಾಸಿಗರನ್ನು ಭಾಗಿಯಾಗಿಸಿ, ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ, ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುವ ವ್ಯವಸ್ಥೆ. ಇದು ಪ್ರಸಕ್ತ ಕೊಡಗಿನಲ್ಲಿರುವ ಕೇವಲ ತೋಟ ನೋಡಿ ಹೋಗುವುದಲ್ಲ. ತೋಟದ ನಡಿಗೆ ಕೊಯ್ಲು ಚಟುವಟಿಕೆ ಸಾವಯವ ಕೃಷಿ ತರಬೇತಿ, ತಳಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಪ್ರವಾಸ ,ಗ್ರಾಮೀಣ ಆಹಾರ ಪದ್ದತಿಯ ಅನುಭವ ಸ್ಥಳೀಯ ಸಂಸ್ಕೃತಿ, ಕಲೆ, ಆಚಾರ-ವಿಚಾರ ಇವೆಲ್ಲವೂ ಸೇರಿದೆ. ಇದು ಪ್ರವಾಸಿಗನಿಗೆ ಕೇವಲ ಕಣ್ಣಿನ ಸಂತೋಷ ನೀಡುವುದಲ್ಲದೆ, ಆತ್ಮದ ತೃಪ್ತಿಯೂ ನೀಡುತ್ತದೆ ಎಂದು ಬಾಲಚಂದ್ರ ವಿವರಿಸಿದರು. ಈ ಸಂಬಂಧ ಅವರು ಇಂದಿನ ಸ್ಥಿತಿ, ಸಮಸ್ಯೆ ಮತ್ತು ಅವಕಾಶಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು. :: ಕಾರ್ಮಿಕರ ಕೊರತೆಗೆ ಪರಿಹಾರ :: ಕೊಯ್ಲು ಸಮಯದಲ್ಲಿ ಕರ‍್ಮಿಕರ ಅಭಾವ ತೀವ್ರ. ಈ ಸಮಸ್ಯೆಗೆ ಕೃಷಿ ಪ್ರವಾಸೋದ್ಯಮ ಒಂದು ಆಸಕ್ತಿಕರ ಉತ್ತರ ಕೊಡಬಲ್ಲದು.ಪ್ರವಾಸಿಗರು ಸ್ವ-ಇಚ್ಛೆಯಿಂದ ಕೊಯ್ಲಿನಲ್ಲಿ ಭಾಗಿಯಾಗಿ ಪಾವತಿ ಮಾಡುತ್ತಾರೆ! ಅವರು ರೈತನಿಗೆ ಪಾವತಿ ಮಾಡಿ ಕೆಲಸ ಮಾಡುವುದರಿಂದ ಇದು ರೈತರಿಗೆ ಲಾಭದಾಯಕವಾಗಬಲ್ಲದು. ಮಳೆ ಅನಿಶ್ಚಿತತೆ ತಾಪಮಾನ ಏರಿಕೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಪ್ರವಾಸೋದ್ಯಮ ಒಂದು ಪ್ರಬಲ ಮಾಧ್ಯಮವಾಗಬಲ್ಲದು ಎಂದರು.









