
ಮಡಿಕೇರಿ NEWS DESK ಏ.24 : ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ಹೋಂಸ್ಟೇಯೊoದರಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ಕಿರುಕುಳ ಪ್ರಕರಣ ಅತ್ಯಂತ ವಿಷಾದಕರ. ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದ್ದು, ಸರಕಾರ ತಕ್ಷಣ ಪ್ರವಾಸೋದ್ಯಮ ನಿಯಮವನ್ನು ರೂಪಿಸಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆದ್ಯತೆ ನೀಡಬೇಕೆಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ನ ಅಧ್ಯಕ್ಷರಾದ ಮೋಂತಿ ಗಣೇಶ್ ಕುಟ್ಟ ಹೋಂಸ್ಟೇ ಪ್ರಕರಣಕ್ಕೆ ಸಂಬoಧಿಸಿದoತೆ ಹೋಂಸ್ಟೇಯ ಪರವಾನಗಿಯನ್ನು ಜಿಲ್ಲಾಧಿಕಾರಿಗಳು ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ. ಪ್ರಕರಣ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗುವಲ್ಲಿಯವರೆಗೆ ಪರವಾನಗಿಯನ್ನು ಅಮಾನತಿನಲ್ಲಿಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು. ಹೋಂಸ್ಟೇ ಮಾಲೀಕರು ಅಸೋಸಿಯೇಷನ್ ನ ಸದಸ್ಯರಾಗಿದ್ದು, ಇವರ ವಿರುದ್ಧದ ಆರೋಪದ ಕುರಿತು ಸಮಗ್ರ ತನಿಖೆಯಾಗಲಿ, ಹೋಂಸ್ಟೇಯಲ್ಲಿರುವ ಸಿಸಿ ಕ್ಯಾಮರಾದ ದೃಶ್ಯಗಳನ್ನು ಮತ್ತು ವೈಫೈ ವ್ಯವಸ್ಥೆಗಳನ್ನು ತನಿಖೆಗೆ ಒಳಪಡಿಸಲಿ ಎಂದು ಒತ್ತಾಯಿಸಿದರು. ಹೋಂಸ್ಟೇ ಪರಿಕಲ್ಪನೆಯಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿಯೊಂದು ಕ್ಷೇತ್ರದ ವ್ಯಕ್ತಿಗೂ ಇದರಿಂದ ಲಾಭವಾಗುತ್ತಿದೆ ಮತ್ತು ಉದ್ಯೋಗ ಸೃಷ್ಟಿಯಾಗುತ್ತಿದೆ. ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ 2006 ರಿಂದ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ನಿಯಮಗಳನ್ನು ಪಾಲಿಸಿಕೊಂಡು ಬಂದಿದೆ.
ಹೋಂಸ್ಟೇ ನಡೆಸುತ್ತಿರುವವರಿಗೆ ಸದಸ್ಯತ್ವವನ್ನು ಪಡೆದು ಪ್ರವಾಸೋದ್ಯಮದ ನಿಯಮ ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಆದರೆ ಹಲವು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿಯಮ ರಚನೆಯಾಗದೆ ಇರುವುದರಿಂದ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ. ಆದ್ದರಿಂದ ಸರಕಾರ ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ಸೂಕ್ತ ರೀತಿಯ ಹೋಂಸ್ಟೇ ನಿಯಮವನ್ನು ರೂಪಿಸಬೇಕೆಂದು ಮೋಂತಿ ಗಣೇಶ್ ಆಗ್ರಹಿಸಿದರು. ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಕೆ.ಎಂ.ಕರುoಬಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ 2478 ಹೋಂಸ್ಟೇಗಳು ಪರವಾನಗಿ ಪಡೆದುಕೊಂಡಿವೆ, 2 ರಿಂದ 3 ಸಾವಿರ ಹೋಂಸ್ಟೇಗಳು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ವಿರುದ್ಧ ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ಕೊಡಗಿನಲ್ಲಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಸಮಸ್ಯೆಗಳ ನಿವಾರಣೆಗೆ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರ ಅಗತ್ಯವಿದೆ. ಆದ್ದರಿಂದ ಸರಕಾರ ತಕ್ಷಣ ಉಪ ನಿರ್ದೇಶಕರನ್ನು ನೇಮಿಸಿ ಪ್ರವಾಸೋದ್ಯಮ ನಿಯಮ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮೀನಾ ಕಾರ್ಯಪ್ಪ ಅವರು ಮಾತನಾಡಿ ಅಸೋಸಿಯೇಷನ್ ನಿರಂತರ ಸಭೆಗಳನ್ನು ನಡೆಸುತ್ತಾ ಹೋಂಸ್ಟೇ ಮಾಲೀಕರು ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಅನಧಿಕೃತ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ, ಇವುಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಸೋಸಿಯೇಷನ್ ನ ಉಪಾಧ್ಯಕ್ಷ ನವೀನ್ ಅಂಬೆಕಲ್ ಮಾತನಾಡಿ ಕುಟ್ಟ ಹೋಂಸ್ಟೇ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರ ಸತ್ಯಾಂಶ ಹೊರ ಬೀಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಮದನ್ ಸೋಮಣ್ಣ ಉಪಸ್ಥಿತರಿದ್ದರು.








