

ಮಡಿಕೇರಿ NEWS DESK ಏ.24 : ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಬಾನಂಡ ಕುಟುಂಬದ ಸಹಯೋಗದಲ್ಲಿ ಮೇ1 ರಿಂದ 3ರವರೆಗೆ “ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿ” ದಕ್ಷಿಣ ಕೊಡಗಿನ ಮಾಯಮುಡಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು, ದ್ವಿತೀಯ ಬಾರಿ ನಡೆಯುತ್ತಿರುವ ಅಮ್ಮ ಕೊಡವ ಸಮುದಾಯದ ಪಂದ್ಯಾವಳಿಯಲ್ಲಿ ಸುಮಾರು 24 ಅಮ್ಮಕೊಡವ ಕುಟುಂಬ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿರುವುದಾಗಿ ಮಾಹಿತಿಯನ್ನಿತ್ತರು.
ಪಂದ್ಯಾವಳಿಯ ಪಂದ್ಯಗಳು ಆರು ಓವರ್‌ಗಳಿಗೆ ಸೀಮಿತವಾಗಿ ನಡೆಯಲಿದೆಯಾದರೆ, ಅಂತಿಮ ಪಂದ್ಯ 8 ಓವರ್‌ಗಳದ್ದಾಗಿರುತ್ತದೆ. ಪಂದ್ಯಾವಳಿ ಉದ್ಘಾಟನೆಗೂ ಮುನ್ನ ಮೇ1 ರಂದು ಬೆಳಿಗ್ಗೆ 8 ಗಂಟೆಗೆ ಮಾಯಮುಡಿಯ ಶ್ರೀರಾಮಂದಿರದಿAದ ಅಮ್ಮ ಕೊಡವರ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಅಮ್ಮ ಕೊಡವ ಸಮುದಾಯದ 32 ಕುಟುಂಬಗಳಿರುವುದಾಗಿ ಮಾಹಿತಿ ನೀಡಿದ ಅವರು, ಕಳೆದ ಬಾರಿ ಶಾಸಕ ಪೊನ್ನಣ್ಣ ಅವರು ಕ್ರೀಡಾಕೂಟಕ್ಕೆ 5 ಲಕ್ಷ ಅನುದಾನ ನೀಡಿದ್ದರು. ಈ ಬಾರಿ 25 ಲಕ್ಷ ನೆರವು ನೀಡಿರುವುದಾಗಿ ಮಾಹಿತಿ ನೀಡಿದರು.
ಅಮ್ಮ ಕೊಡವ ಜನಾಂಗಕ್ಕೆ ಸೀಮಿತವಾಗಿ ನಡೆಯಲಿರುವ ಪಂದ್ಯಾವಳಿಯನ್ನು ಮೇ1 ರಂದು ಬೆಳಿಗ್ಗೆ 10 ಗಂಟೆಗೆ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಬಾನಂಡ ಕುಟುಂಬದ ಅಧ್ಯಕ್ಷರಾದ ಬಾನಂಡ ಎಸ್. ರಮೇಶ್ ವಹಿಸಲಿದ್ದು, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಾನಂಡ ಎನ್.ಪ್ರತ್ಯು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಇಂಧನ ಖಾತೆ ಸಚಿವರಾದ ಕೆ.ಜೆ.ಜಾರ್ಜ್, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮೈಸೂರಿನ ನ್ಯಾಯಾಧೀಶರಾದ ಅಮ್ಮತ್ತೀರ ಶಿಲ್ಪಾ ಗಣೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಉಚ್ಚ ನ್ಯಾಯಾಲಯದ ವಕೀಲರಾದ ಹೆಮ್ಮಚ್ಚಿಮನೆ ಸುಧೀರ್ ಮಾದಮ್ಮಯ್ಯ, ಬಾನಂಡ ಕ್ರೀಡಾ ಸಮಿತಿ ಅಧ್ಯಕ್ಷರಾದ ಬಾನಂಡ ಎ.ಸುನಿತ್, ಮಾಯಮುಡಿ ಆರ್‌ಎಂಸಿ ಮಾಜಿ ಅಧ್ಯಕ್ಷರಾದ ಕಾಳಪಂಡ ಟಿಪ್ಪು ಬಿದ್ದಪ್ಪ ಮತ್ತು ಮೈಸೂರಿನ ಬಾನಂಡ ಲೀಲಾವತಿ ಶಂಭು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯ ಸಮಾರೋಪ ಸಮಾರಂಭ ಮೇ3 ರಂದು ಮಧ್ಯಾಹ್ನ 2 ಗಂಟೆಗೆ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಬಾನಂಡ ಎನ್.ಪ್ರತ್ಯು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಹಲ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಕಾರ್ಯದರ್ಶಿ ಬಾನಂಡ ಸೂದನ್, ಖಜಾಂಚಿ ಬಾನಂಡ ಪಕಾಶ್, ಸಂಚಾಲಕ ಬಾನಂಡ ಕೃಷ್ಣರಾಜ್ ಹಾಗೂ ಅಮ್ಮಕೊಡವ ಸಮಾಜದ ನಿರ್ದೇಶಕ ನರಿಯಂಡಮ್ಮoಡ ಜನಾರ್ಧನ್ ಉಪಸ್ಥಿತರಿದ್ದರು.









