
ಸಿದ್ದಾಪುರ ಏ.25 NEWS DESK : ಕಾಡು ಪ್ರಾಣಿಗಳ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವರ್ಷವಿಡಿ ಕಷ್ಟಪಟ್ಟು ಬೆಳೆದ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದೆ. ರೈತರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಆತಂಕದ ಜೀವನ ನಡೆಸುವಂತಾಗಿದೆ. ಸರ್ಕಾರ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ವೈಜ್ಞಾನಿಕವಾಗಿ ಕಾಡು ಪ್ರಾಣಿಗಳ ಹಾವಳಿಯನ್ನ ಶಾಶ್ವತವಾಗಿ ತಡೆಗಟ್ಟಬೇಕೆಂದು ಚೆನ್ನಂಗಿ ಕಾವೇರಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಡಾ.ಎ.ಸಿ.ಗಣಪತಿ ಒತ್ತಾಯಿಸಿದರು ಪಾಲಿಬೆಟ್ಟ ಸಮೀಪದ ಚೆನ್ನಂಗಿ ಕಾವೇರಿ ಸೇವಾ ಸಂಘದ ಸಭಾಂಗಣದಲ್ಲಿ ಬೆಳೆಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಕೃಷಿ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದೆ.ಇದರಿಂದ ರೈತ ಆರ್ಥಿಕ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಟ್ಟೆಪಾಡಿನ ಜೀವನಕ್ಕಾಗಿ ದುಡಿಯುವ ಕಾರ್ಮಿಕರು ಕಾಡುಪ್ರಾಣಿಗಳ ಹಾವಳಿಯಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಶಿಕ್ಷಣ ಕಲಿಯಬೇಕೆಂಬ ಆಸೆಯಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ವನ್ಯ ಜೀವಿಗಳ ಉಪಟಳದಿಂದಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗು ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳ ಹಾವಳಿಯನನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಕೊಡಗಿನ ಜನರ ತಾಳ್ಮೆಯನ್ನು ಪರೀಕ್ಷಿಸದೆ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ವನ್ಯಜೀವಿಗಳ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಆನೆ ಕಂದಕಗಳನ್ನು ದುರಸ್ತಿಗೊಳಿಸುವುದು, ಚೆನ್ನಂಗಿ ಬಸವನಹಳ್ಳಿ ರಸ್ತೆಯ ರೈಲ್ವೆ ಗೇಟ್ ಮೆಲುಸ್ತುವಾರಿಗೆ ಸಿಬ್ಬಂದಿ ನೇಮಕ ಮತ್ತು ಅಲ್ಲಿ ವಸತಿ ಗೃಹ ನಿರ್ಮಾಣ, ಅಳವಡಿಸಿರುವ ರೈಲ್ವೆ ಹಳಿಗಳ ಬೇಲಿಯನ್ನು ವ್ಯವಸ್ಥಿತವಾಗಿ ಇರಿಸುವುದು ಮತ್ತು ಕಾವಲುಗಾರರನ್ನು ನಿಯೋಜನೆ ಮಾಡುವುದು. ಅಧಿಕಾರಿಗಳು ಸಾರ್ವಜನಿಕರ ವಾಟ್ಸ್ ಅಪ್ ಗ್ರೂಪ್ ರಚಿಸಿ ಮಾಹಿತಿ ನೀಡುವುದು, ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವುದನ್ನು ನಿಷೇಧಿಸಬೇಕು ಮತ್ತು ಅರಣ್ಯ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸಿ ಮೋಜುಮಸ್ತಿಗೆ ಕಡಿವಾಣ ಹಾಕಬೇಕು ಎನ್ನುವುದು ಸೇರಿದಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮರವರು ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ, ಅರಣ್ಯ ಇಲಾಖೆ ಕೈಗೊಂಡಿರುವ ಯೋಜನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಹುಣಸೂರು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ್, ವಲಯ ಅರಣ್ಯ ಅಧಿಕಾರಿ ದೇವರಾಜು, ಉಪವಲಯ ಅಧಿಕಾರಿ ಚೆನ್ನವಿರೇಶ್, ಶಶಿ, ಕಾವೇರಿ ಸೇವಾ ಸಂಘದ ಅಧ್ಯಕ್ಷರಾದ ತೆಕ್ಕಡೆ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಬೆಳೆಗಾರರಾದ ಎಂ.ಎಸ್.ಟವಿ, ಎ.ಎಸ್.ಶ್ಯಾಮ್, ಪಿ.ಎ.ಅನಂತರಾಮ್, ಎ.ಬಿ.ವಿನು ಪೊನ್ನಪ್ಪ, ಮುಲ್ಲೇಂಗಡ ಕಿಶೋರ್ , ವಿ.ಬಿ.ಸುರೇಶ್, ಮುಸ್ತಫಾ ಸೇರಿದಂತೆ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.









