
ವಿರಾಜಪೇಟೆ ಏ.25 NEWS DESK : ಕೆದಮುಳ್ಳೂರು ಗ್ರಾಮ ತರ್ಮೆಮೊಟ್ಟೆ ಗ್ರಾಮದಲ್ಲಿ ಶ್ರೀ ಪಾಷಾಣಮೂರ್ತಿ, ಗುಳಿಗ ದೈವಗಳ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮದ ನಿವಾಸಿ ಬಿ.ಇ.ಹೊನ್ನಪ್ಪ ( ನಾರಾಯಣ) ಮನೆಯಲ್ಲಿ ಗಣಪತಿ ಹೋಮ ಮತ್ತು ಸತ್ಯ ನಾರಾಯಣ ಪೂಜೆಯೊಂದಿಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಗುರು ಹಿರಿಯರು, ಕುಟುಂಬ ಸದಸ್ಯರಿಂದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಎಣ್ಣೆಯನ್ನು ದೈವ ನರ್ತಕರಿಗೆ ನೀಡಲಾಯಿತು. ಸುಳ್ಯದ ಬೊಳಿಯ ಮಜಲು ಜಯರಾಂ ಅವರ( ದೈವ ನರ್ತಕರು) ಸಾನಿದ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಟುಂಬ ಮನೆಯಿಂದ ದೈವಗಳ ಭಂಡಾರ ಇಳಿಸಲಾಯಿತು. ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಪಾಷಾಣಮೂರ್ತಿ ದೈವ ನೇಮ ಮತ್ತು ಗುಳಿಗ ದೈವದ ನೇಮ ದೈವದ ನೇಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರ್ಶಿತ್ ಮತ್ತು ತಂಡ (ದೈವಗಳಿಗೆ ನುಡಿಸುವ ವಿಶೇಷ ವಾದ್ಯ) ನುಡಿಸಿದ ವಾದ್ಯ ಭಕ್ತರನ್ನು ಮಂತ್ರ ಮುಗ್ದವಾಗಿಸಿತು. ನೇಮೋತ್ಸವದಲ್ಲಿ ಕುಟುಂಬ ವರ್ಗ, ಗ್ರಾಮಸ್ಥರು ಹಾಗೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಕೃಪೆಗೆ ಪಾತ್ರರಾದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









