
ಮಡಿಕೇರಿ ಏ.27 NEWS DESK : ಮಡಿಕೇರಿ ನಗರದ ಗುರುಭ್ಯೋ ಮುನೀಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಏ.29, 30 ಮತ್ತು ಮೇ 1 ರಂದು ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಮತ್ತು ಉತ್ಸವ ಸಮಿತಿಯ ಪ್ರಮುಖರು ಮೂರು ದಿನಗಳ ಕಾಲ ನಡೆಯುವ ಗುರುಭ್ಯೋ ಮುನೀಶ್ವರ, ಚಾಮುಂಡೇಶ್ವರಿ ಹಾಗೂ ನಾಗ ದೇವರ ದೇವಾಲಯಗಳ ಲೋಕಾರ್ಪಣೆ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿದರು. ಏ.29 ರಂದು ಬೆಳಿಗ್ಗೆ 10-15ಕ್ಕೆ ಸಂಕಲ್ಪ, ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯವಾಚನ, ಸ್ಥಳ ಶುದ್ಧಿ, ರುದ್ರಪಾಠ ಪಠಣ, ಸುದರ್ಶನ ಪೂರ್ವಕ ಪ್ರಾಯಶ್ಚಿತ ತಿಲ ಹೋಮ ನಡೆಯಲಿದೆ. ಸಂಜೆ 6 ಗಂಟೆಗೆ ಬನ್ನಿ ಮಂಟಪದಿಂದ ಗುರುಭ್ಯೋ ಮುನೀಶ್ವರ ದೇವಾಲಯದವರೆಗೆ ಮಂಗಳವಾದ್ಯದೊಂದಿಗೆ ಕಳಶ ಮೆರವಣಿಗೆ ಸಾಗಲಿದೆ. 7-30 ಗಂಟೆಗೆ ಪ್ರಸನ್ನ ಪೂಜೆ ನೆರವೇರಲಿದೆ. ಏ.30 ರಂದು ಬೆಳಿಗ್ಗೆ 7 ಗಂಟೆಗೆ ಫಲನ್ಯಾಸದ ಪೂರ್ವಕ ಮಹಾಪ್ರಾರ್ಥನೆ, ಮಹಾಸಂಕಲ್ಪ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯವಾಚನ, ಪ್ರಸಾದ ಶುದ್ಧಿ, ಆಚಾರವರ್ಣ, ಗಣಪತಿ ಹೋಮ ನಂತರ ಪ್ರಸಾದ ವಿತರಣೆಯಾಗಲಿದೆ. ಸಂಜೆ 5 ಗಂಟೆಗೆ ಆದಿವಾಸ, ರಾಕ್ಷೋಗ್ನ ವಾಸ್ತು ಕಳಶ ಪ್ರತಿಷ್ಠಾಪನೆ ಪೂರ್ವಕ ಪೂಜೆ ಹೋಮ, ಕಳಶ ಸ್ಥಾಪನೆ ತತ್ವ ಕಳಸ, ಆದಿವಾಸ ಕಳಸ ಸ್ಥಾಪನೆ, ರಾಕ್ಷೋಗ್ನ ವಾಸ್ತು ಹೋಮ, ಪ್ರತಿಷ್ಠಾಮೂರ್ತಿಗಳಿಗೆ ಅದಿವಾಸ, ದಿಕ್ಪಾಲಕ ಬಲಿ, ಶಯನಾಧಿವಾಸ ನಂತರ ಪ್ರಸಾದ ವಿತರಣೆಯಾಗಲಿದೆ. ಮೇ 1 ರಂದು ಬೆಳಿಗ್ಗೆ 6 ಗಂಟೆಗೆ ಗುರುಗಣಪತಿ ಪೂಜೆ, ಪುಣ್ಯವಾಚನೆ ಪ್ರತಿಷ್ಠಾ ಪೂರ್ವ ಹೋಮ, ಬೆಳಿಗ್ಗೆ 10-20ರಿಂದ 11-15ರ ತನಕ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಗುರು ಮುನೀಶ್ವರ ಹಾಗೂ ಚಾಮುಂಡೇಶ್ವರಿ ದೇವಿಯ ಕಳಶ ಪೂರ್ವಕ ಪರಿವಾರ ದೇವತಾ ಬ್ರಹ್ಮಕಳಶೋತ್ಸವ ಪ್ರತಿಷ್ಠಾಪನೆ ನಡೆಯಲಿದೆ. ಬೆಳಿಗ್ಗೆ 11-30 ಗಂಟೆಗೆ ಶಕ್ತಿ ಹೋಮ, ತತ್ವಕಲಾ ಹೋಮ, ರುದ್ರ ಹೋಮ, ಮಹಾಪೂರ್ಣಹುತಿ, ಪ್ರತಿಷ್ಠಾಪನೆ ದೇವತಾ ಮಹಾ ಕಳಸಾಭಿಷೇಕ ಅರ್ಚನೆ, ಮಹಾಪೂಜೆ, ಮಹಾನೈವೇದ್ಯ, ಮಹಾಮಂಗಳಾರತಿ, ಮಹಾ ಪ್ರಾರ್ಥನೆ, ದೇವತಾ ಪ್ರಸಾದ ವಿತರಣೆ, ಬ್ರಾಹ್ಮಣ ಪೂಜೆ ಹಾಗೂ ಬ್ರಹ್ಮಚಾರ್ಯ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ. ಮಧ್ಯಾಹ್ನ 12-30 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆಯಾಗಲಿದೆ. ಸಂಜೆ 5-30 ಗಂಟೆಗೆ ಆಶ್ಲೇಷ ಬಲಿ, ಸಂಜೆ 6-30 ಗಂಟೆಗೆ ರಂಗಪೂಜೆ, ನಂತರ ಬ್ರಾಹ್ಮಣ ಆಶೀರ್ವಚನವಾಗಲಿದೆ.
ಅಷ್ಠಮಂಗಲ ಪ್ರಶ್ನೆಗೆ ಪೂರಕವಾಗಿ ದೇವಾಲಯದ ಆಯಾವನ್ನು ಶಿಲ್ಪಿಗಳಾದ ಬಿದ್ರಡ್ಕ ರಮೇಶ್ ಕಾರಂತ್, ಕಾಸರಗೋಡು ಅವರು ಸಿದ್ಧಪಡಿಸಿದ್ದಾರೆ. ನಕಾಶೆಯ ಪ್ರಕಾರವಾಗಿ ಶಿಲ್ಪಿ ಎ.ಪಿ.ಕರುಣಾಕರ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ತಂತ್ರಿಗಳಾದ ವೇದಾಮೂರ್ತಿ, ಉಲ್ಲಾಸ್ ಹನುಮಂತ್ ಭಟ್ ಹಾಗೂ ವೇದಮೂರ್ತಿ ಗಣೇಶ್ ರಾಮಚಂದ್ರ ಭಟ್ ಅವರುಗಳು ಬ್ರಹ್ಮ ಕಳಶೋತ್ಸವದ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಲಿದ್ದಾರೆ. ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಗೊಂಡಿದ್ದು, ಕಾಟೇರಮ್ಮನ ಮೂರ್ತಿ ಪ್ರತಿಷ್ಠಾಪನೆ ಕೂಡ ಬ್ರಹ್ಮಕಲಶೋತ್ಸವದ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ಹಿರಿಯ ಗೌರವ ಸಲಹೆಗಾರ ಗಜರಾಜ ನಾಯ್ಡು, ಉತ್ಸವ ಸಮಿತಿಯ ಅಧ್ಯಕ್ಷ ಎಂ.ಎಲ್.ಸತೀಶ್, ಶೋಭಾಯಾತ್ರೆಯ ಅಧ್ಯಕ್ಷ ಆರ್.ರಾಕೇಶ್, ಪ್ರಧಾನ ಕಾರ್ಯದರ್ಶಿ ಸಿ.ಎಸ್.ರಂಜಿತ್ ಕುಮಾರ್ ಹಾಗೂ ಖಜಾಂಚಿ ಪವನ್ ಸಿ.ಹೆಚ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವ ಸಲಹೆಗಾರ ಗುಣಶೇಖರ್ ಉಪಸ್ಥಿತರಿದ್ದರು.









