
ವಿರಾಜಪೇಟೆ ಏ.27 NEWS DESK : ಹೆಗ್ಗಳ ಗ್ರಾಮದ ಬೂದಿಮಾಳ ಶ್ರೀ ಕಿರಾತೇಶ್ವರ ದೇವಾಲಯದ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಅರ್ಚಕರು ಕ್ಷೇತ್ರದ ಶ್ರೀ ಮಹಾಗಣಪತಿಗೆ ಹಾಗೂ ವನದುರ್ಗೆ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥನೆಯನ್ನು ಸಲ್ಲಿಸದರು. ನಂತರ ಶ್ರೀ ಕಿರಾತೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮೊದಲಿಗೆ ಅರ್ಚಕರು ಸಂಕಲ್ಪ ಪೂಜೆ, ಪ್ರಾರ್ಥನೆ ಹಾಗೂ ಪಂಚಾಮೃತ ಅಭಿಷೇಕವನ್ನು ನೆರವೇರಿಸಿದರು. ಎಳನೀರು ಅಭಿಷೇಕ, ಅಲಂಕಾರ ಪೂಜೆಯನ್ನು ಮಾಡಿದರು. ತದನಂತರ ವಿಶೇಷ ಅರ್ಚನೆಯನ್ನು ಮಾಡಿ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯು ಜರುಗಿತು. ಕೇರಳದ ಚಂಡೆ ಬಳಗದವರಿಂದ ಚಂಡೆ ಸೇವೆಯು ಈ ಸಂದರ್ಭದಲ್ಲಿ ನಡೆಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ಜರುಗಿತು. ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ರವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕರಾದ ದೇವಪ್ಪ ಪೂಜಾರಿ ಹಾಗೂ ಅವರ ಮನೆಯವರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಉಪಸ್ಥಿತರಿದ್ದರು.








