

ಮಡಿಕೇರಿ NEWS DESK ಏ.28 : ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೇ 1 ರಿಂದ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 1 ರಂದು ಬೆಳಿಗ್ಗೆ 9 ಗಂಟೆಗೆ ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದಿಮಸಂಜಾತ ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧಕ-ಅನಿಮಿಸ್ಟಿಕ್ ಕೊಡವರಿಗಾಗಿ ಕೊಡವ ಪ್ರದೇಶದ ಗಡಿಗಳನ್ನು ಬದಲಾಯಿಸದೆ ಕೊಡವ ಸಾಂಪ್ರದಾಯಿಕ ನೆಲೆಯಲ್ಲೇ ಪ್ರತ್ಯೇಕ ಕೊಡವ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೊಡವಲ್ಯಾಂಡ್ ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ, ಆಂತರಿಕ ಸ್ವಯಂ-ನಿರ್ಣಯದ ಹಕ್ಕುಗಳು, ಕೊಡವರನ್ನು ಬುಡಕಟ್ಟು ಪಟ್ಟಿಗೆ ವರ್ಗೀಕರಿಸುವುದು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡುವುದು, ವಿಶ್ವಸಂಸ್ಥೆಯಿoದ ಆದಿಮಸಂಜಾತ ನಿವಾಸಿಗಳೆಂದು ಮಾನ್ಯತೆ ಪಡೆಯಲು ಸಿಎನ್‌ಸಿ ಕಳೆದ 36 ವರ್ಷಗಳಿಂದ ಅವಿರತ ಮತ್ತು ಶಾಂತಿಯುತವಾಗಿ ಶ್ರಮಿಸುತ್ತಿದೆ. ಸಿಕ್ಕಿಂನ ಬೌದ್ಧ ಭಿಕ್ಷುಗಳಿಗಾಗಿ ಇರುವ “ಸಂಘ” ಅದೃಶ್ಯ ಮತಕ್ಷೇತ್ರ ಮಾದರಿಯಲ್ಲಿ, ಪ್ರತ್ಯೇಕ ಕೊಡವ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರವನ್ನು ರಚಿಸಬೇಕು. ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವಾಗ, ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಮೀಸಲಿಡಬೇಕು ಎಂದು ಒತ್ತಾಯಿಸಿರುವ ಎನ್.ಯು.ನಾಚಪ್ಪ, ನಮ್ಮ ದೊಡ್ಡ ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು ಜನಗಣತಿಯೇ ಪ್ರಮುಖ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಡವ ಧಾರ್ಮಿಕ ಸಂಸ್ಕಾರ “ಗನ್ -ತೋಕ್” ಅನ್ನು ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ರಕ್ಷಿಸಲ್ಪಟ್ಟ ಅತ್ಯಗತ್ಯ ಧಾರ್ಮಿಕ ಆಚರಣೆಗಳ ವ್ಯಾಪ್ತಿಗೆ ತರಬೇಕು. ಕೊಡವರ ಮಾತೃಭಾಷೆಯಾದ “ಕೊಡವ ತಕ್”, ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯಾಗಿದ್ದು, ಇದನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ತಲಕಾವೇರಿಯನ್ನು ಆದಿಮಸಂಜಾತ ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಘೋಷಿಸಬೇಕು. ಕೊಡವರ ಪವಿತ್ರ ಆಧ್ಯಾತ್ಮಿಕ ಅಭಯಾರಣ್ಯಗಳಾದ “ಮಂದ್” ಮತ್ತು “ದೇವಕಾಡ್” ಗಳನ್ನು ರಕ್ಷಿಸಿ, ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಪರಂಪರೆಯನ್ನು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ಪರರ ಪಾಲಾದ ಕೊಡವರ ಪಾರಂಪರಿಕ ಭೂಮಿಯ ಮರುಸ್ಥಾಪನೆಯಾಗಬೇಕು. ದೇವಟ್ ಪರಂಬು, ನಾಲ್ನಾಡ್ ಅರಮನೆ ಹಾಗೂ ಮಡಿಕೇರಿ ಕೋಟೆಯಲ್ಲಿ ನಡೆದ ಕೊಡವ ರಾಜಕೀಯ ಹತ್ಯೆಗಳನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಬೇಕು ಮತ್ತು ಅಂತರರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿ ಕೋಟೆಯಲ್ಲಿ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಕಾವೇರಿ ನದಿ ನೀರಿನ ಹಂಚಿಕೆಯನ್ನು ಅಂತರರಾಷ್ಟ್ರೀಯ ನದಿಗಳ ಬಳಕೆ ಕುರಿತ 1966ರ ಹೆಲ್ಸಿಂಕಿ ನಿಯಮಗಳ ಪ್ರಕಾರ ಕೊಡವ ಪ್ರದೇಶಕ್ಕೆ ಹಂಚಿಕೆ ಮಾಡಬೇಕು. ಕೊಡವ ಇತಿಹಾಸವನ್ನು ತಿರುಚಿದ ಇತಿಹಾಸಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ಕಡತಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯದಾದ್ಯಂತ ಇರುವ ಗ್ರಂಥಾಲಯಗಳಲ್ಲಿ ನೈಜ ಕೊಡವ ಇತಿಹಾಸವನ್ನು ಪುನಃಸ್ಥಾಪಿಸಬೇಕು ಮತ್ತು ಲಭ್ಯವಾಗುವಂತೆ ಮಾಡಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಮುಂದಿಟ್ಟುಕೊoಡು ಸಿಎನ್‌ಸಿ ಕೊಡವ ಪ್ರದೇಶದಾದ್ಯಂತ ಶಾಂತಿಯುತ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಆರಂಭಿಕವಾಗಿ ಸಿಎನ್‌ಸಿ ಸ್ವಯಂಸೇವಕರು ಕೊಡವ ಪವಿತ್ರ ಯಾತ್ರಾಸ್ಥಳವಾದ ತಲಕಾವೇರಿಯಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿ, ನಮ್ಮ ಸಾಂವಿಧಾನಿಕ ಕಾರ್ಯಕ್ಕಾಗಿ ದೈವಿಕ ಆಶೀರ್ವಾದವನ್ನು ಕೋರುತ್ತೇವೆ ಎಂದು ತಿಳಿಸಿದ್ದಾರೆ.








