
ಮಡಿಕೇರಿ NEWS DESK ಏ.28 : ಕೊಡಗು ಬಂಟರ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಮಡಿಕೇರಿಯ ಅಬ್ಬಿಫಾಲ್ಸ್ ರಸ್ತೆಯ ಬಳಿ ಕೊಡಗು ಬಂಟರ ಭವನ ನಿರ್ಮಾಣ ಕಾಮಗಾರಿಗೆ ಮೇ 1 ರಂದು ಶಂಕುಸ್ಥಾಪನೆ ನೆರವೇರಲಿದೆ ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 12 ರಿಂದ 15 ಕೋಟಿ ರೂ. ವೆಚ್ಚದಲ್ಲಿ ಬಂಟರ ಭವನ ನಿರ್ಮಾಣಗೊಳ್ಳಲಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪುತ್ತೂರು ಶಾಸಕ ಅಶೋಕ ಕುಮಾರ್ ರೈ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ದಾನಿ ದಿ.ಡಾ.ಬಿ.ಟಿ.ಪ್ರೇಮನಾಥ್ ಪೂಂಜಾ ಅವರು ಭವನ ನಿರ್ಮಾಣಕ್ಕಾಗಿ ತಮ್ಮ 0.52 ಎಕರೆ ಜಾಗವನ್ನು ದಶಕದ ಹಿಂದೆಯೇ ದಾನವಾಗಿ ನೀಡಿದ್ದರು. ಸುಸಜ್ಜಿತವಾದ ಬಂಟರ ಭವನ ನಿರ್ಮಾಣವಾಗಬೇಕೆಂಬುದು ನಮ್ಮ ಸಮುದಾಯದ ಹಲವು ವರ್ಷಗಳ ಕನಸಾಗಿತ್ತು. ಇದು ಈಗ ನನಸಾಗುತ್ತಿದ್ದು, ಕಾರ್ಯಕ್ರಮದಲ್ಲಿ ದಿವಂಗತ ಪ್ರೇಮನಾಥ್ ಪೂಂಜಾ ಅವರಿಗೆ ಮರಣೋತ್ತರವಾಗಿ ವಿಶೇಷ ಬಿರುದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. *ಬಂಟ್ಸ್ ಕ್ರೀಡಾಕೂಟ* ಏ.30 ರಿಂದ ಮೇ3 ರವರೆಗೆ ಕೊಡಗು ಯುವ ಬಂಟ್ಸ್ ವತಿಯಿಂದ ಮಡಿಕೇರಿಯಲ್ಲಿ ಕ್ರೀಡಾಕೂಟವನ್ನು ಕೂಡ ಆಯೋಜಿಸಲಾಗಿದೆ. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಬಿ.ಡಿ.ಜಗದೀಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ, ಉಪಾಧ್ಯಕ್ಷ ಬಿ.ಎಸ್.ಸದಾಶಿವ ರೈ, ಕಾರ್ಯದರ್ಶಿ ರವೀಂದ್ರ ವಿ.ರೈ, ಬಂಟರ ಭವನ ಟ್ರಸ್ಟ್ ಕಾರ್ಯದರ್ಶಿ ಅಪ್ಪು ಬಾಲಕೃಷ್ಣ ರೈ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಸದಾನಂದ ರೈ ಉಪಸ್ಥಿತರಿದ್ದರು.







