


ಮಡಿಕೇರಿ ಏ 29 NEWS DESK : ಜಿಲ್ಲಾ ಪೊಲೀಸ್ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಮ್.ಕಾರ್ಯಪ್ಪ ಕಾಲೇಜ್ ಹಾಗೂ ಎನ್ ಎಸ್ ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ “ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜು, ಮದ್ಯ/ಮಾದಕ ವಸ್ತುಗಳ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದಾದ ವಿವಿಧ ಸಹಾಯವಾಣಿ ಸಂಖ್ಯೆಗಳನ್ನು ಹಾಗೂ KSP ಆಪ್ ಸಂಬಂಧಿತ ಮಾಹಿತಿಯನ್ನು ನೀಡಿದರು. ಅದೇ ಸಂದರ್ಭದಲ್ಲಿ “ಸಮ್ಮಿತ್ರಾ ಆಪ್” ಕುರಿತು ಮಾಹಿತಿ ನೀಡಿ, ಮಾದಕ ವಸ್ತುಗಳನ್ನು ದುರುಪಯೋಗಪಡಿಸುವವರ ಬಗ್ಗೆ ವಿವರಗಳನ್ನು ನೀಡುವ ಮೂಲಕ ಸಮಾಜದಲ್ಲಿ ಈ ಸಮಸ್ಯೆಯನ್ನು ನಿರ್ಮೂಲಗೊಳಿಸಲು ವಿದ್ಯಾರ್ಥಿಗಳು ಸಹಕರಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಘವ ಬಿ. ನಮ್ಮ ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಡ್ರಗ್ ಬಳಕೆದಾರರು ಹಾಗೂ ಸರಬರಾಜು ಮಾಡುವವರ ಕುರಿತು ತಿಳಿದುಬಂದಲ್ಲಿ ಪೊಲೀಸ್ ಅಥವಾ ಪೋಷಕರು ಬೋಧಕ ರಿಗೆ ಮಾಹಿತಿ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ASI ಎಂ.ಡಿ.ಗಣೇಶ್, ಎನ್‍ಎಸ್‍ಎಸ್ ಅಧಿಕಾರಿ ಡಾ. ಶೈಲಶ್ರೀ ಕೆ, ಪೊಲೀಸ್ ಸಿಬ್ಬಂದಿ, ನ್ ಎಸ್ ಎಸ್ ನಾಯಕರು, ಸ್ವಯಂಸೇವಕರು ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಪ್ರದೀಪ್ ಆರ್. ಭಂಡಾರಿ ಸ್ವಾಗತಿಸಿದರು, ಎನ್ ಎಸ್ ಎಸ್ ಅಧಿಕಾರಿ ಆಲೋಕ್ ಬೆಜೈ ವಂದಿಸಿದರು.









