

ಮಡಿಕೇರಿ NEWS DESK ಏ.29 : 2025-26 ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಇತ್ತೀಚೆಗಷ್ಟೇ ಹೊರ ಬಿದ್ದಿದ್ದು ಕೊಡಗು ಜಿಲ್ಲೆಯು ಉತ್ತಮ ಫಲಿತಾಂಶವನ್ನು ಕಾಯ್ದುಕೊಂಡಿದೆ. ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದೆ. ಇಂತಹ ಸಾಧನೆಯ ಹಾದಿಯಲ್ಲಿರುವ ಶಾಲೆ ಎಂದರೆ ಸರಕಾರಿ ಪ್ರೌಢಶಾಲೆ ಮೂರ್ನಾಡು. ಕಳೆದ ಆರು ವರ್ಷಗಳಿಂದ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿದ ಗಮನಾರ್ಹ ಸಾಧನೆ ಈ ಶಾಲೆಯದಾಗಿದೆ. ಮೂರ್ನಾಡುವಿನ ಸ್ಥಳೀಯರ, ವಿದ್ಯಾಭಿಮಾನಿಗಳ, ಹಿತೈಷಿಗಳ ನಿರಂತರ ಬೇಡಿಕೆಯ ಫಲವಾಗಿ 2007ರಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳೊಂದಿಗೆ ಹಳೆಯ ಕಟ್ಟಡ ಒಂದರಲ್ಲಿ ಪ್ರಾರಂಭವಾದ ಈ ಶಾಲೆ ಇಂದು ಅತ್ಯುತ್ತಮವಾದ ಕಟ್ಟಡ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ವಿಶಾಲ ಆಟದ ಮೈದಾನ ಹಾಗೂ ಉತ್ತಮ ಬೋಧಕ ವೃಂದದವರನ್ನು ಹೊಂದಿದೆ. ನೋಡುವವರಿಗೆ ಇದು ಒಂದು ಖಾಸಗಿ ಶಾಲೆ ಎಂಬ ಭಾವನೆಯನ್ನು ಮೂಡಿಸುತ್ತದೆ.
ಸರ್ಕಾರಿ ಶಾಲೆಯ ಸಮಸ್ಯೆಗಳು ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿರುತ್ತದೆ. ಅದು ಪೋಷಕರ ಶೈಕ್ಷಣಿಕ ಅರ್ಹತೆಯಲ್ಲಿ ವೃತ್ತಿ ಬದುಕಿನಲ್ಲಿ, ಆರ್ಥಿಕ ಸ್ಥಿತಿಗತಿಯಲ್ಲಿಯೂ ಕೂಡ ತೀರ ಹೆಚ್ಚು. ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮನಸ್ಸಿನ ಸೈರ್ಯವಿಲ್ಲದೆ ದಾರಿ ತಪ್ಪುವ ವಿದ್ಯಾರ್ಥಿಗಳ ಸಂಖ್ಯೆ, ನಿಜಕ್ಕೂ ಸರಕಾರಿ ಶಾಲೆಗಳಲ್ಲಿಯೇ ಹೆಚ್ಚು. ಈ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಮಕ್ಕಳಿಗೆ ಒತ್ತಾಸೆಯಾಗಿ ನಿಂತು ಅವರಿಂದ ಶೇಕಡ ನೂರರಷ್ಟು ಫಲಿತಾಂಶ ಗಿಟ್ಟಿಸುವುದು ಪ್ರಸಂಶನಾರ್ಹ. ಇದಕ್ಕೆಲ್ಲ ಕಾರಣ ಈ ಶಾಲೆಯ ಶಿಕ್ಷಕ ವೃಂದದವರ ಛಲ ಬಿಡದ ಪ್ರಯತ್ನ. ಎಲ್ಲಾ ಅಡೆತಡೆಯ ನಡುವೆ ವರ್ಷವಿಡಿ ವಿಶೇಷ ತರಗತಿ, ಮಧ್ಯಂತರ ರಜೆಯಲ್ಲಿ, ಸಾರ್ವಜನಿಕ ರಜಾ ದಿನಗಳಂದು ನಡೆಸುವ ವಿಶೇಷ ತರಗತಿಗಳು, ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಕಳೆದ ಹಲವು ವರ್ಷಗಳಿಂದ ಜನವರಿ ತಿಂಗಳ 1ನೇ ತಾರೀಖಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ದಿನದ ಹಿಂದಿನ ದಿನದ ರಾತ್ರಿ ಎಂಟು ಗಂಟೆಯವರೆಗೆ ಸತತವಾಗಿ ಮೂರು ತಿಂಗಳವರೆಗೆ ನಡೆಸುವ ಅಭ್ಯಾಸ ಈ ಶಾಲೆಯ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ಮಕ್ಕಳ ಬಗೆಗಿರುವ ಕಾಳಜಿ, ವಿದ್ಯಾರ್ಥಿ ಸ್ನೇಹಿ ವಾತಾವರಣ, ಶಿಸ್ತು, ಸ್ವಚ್ಛತೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ಒಂದು ಉತ್ತಮ ಕಲಿಕಾ ವಾತಾವರಣ ಈ ಶಾಲೆಯದಾಗಿದೆ.
ಸರಕಾರದ ಅನುದಾನ, ಉತ್ತಮ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ಸು ವಾರಿ ಸಮಿತಿ, ಶಾಲಾ ಸ್ನಾಪನಾ ಸಮಿತಿ, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು, ವಿದ್ಯಾಭಿಮಾನಿಗಳು, ಹಿತೈಷಿಗಳ ಸಹಕಾರದೊಂದಿಗೆ ಈ ಶಾಲೆಯು ಪ್ರಗತಿಯತ್ತ ಸಾಗುತಿದೆ. 2019ರಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕರಾಗಿ ಬಂದ ಶ್ರೀ ಗುರುರಾಜ ಕೆ ಪಿ, ಇವರ ದೂರ ದೃಷ್ಟಿ, ಶಾಲೆಯ ಬಗೆಗಿನ ವಿಶೇಷ ಪ್ರೀತಿ, ಎಲ್ಲಾ ಶಿಕ್ಷಕರ ಸಹಕಾರ, ಕರ್ತವ್ಯ ನಿಷ್ಠೆಯ ಫಲವಾಗಿ ಈ ಶಾಲೆ ಇಂದು ಪರಿಪೂರ್ಣತೆಯನ್ನು ಕಂಡಿದೆ ಹಾಗೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮವನ್ನು ಹೊಂದಿರುವ ಈ ಶಾಲೆಯು ಪ್ರಸಕ್ತ ಸಾಲಿನಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಗೆ ಹಾಜರಾದ ಎಲ್ಲಾ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಇಬ್ಬರು ಉನ್ನತ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶೇಕಡ ನೂರರಷ್ಟು ಫಲಿತಾಂಶ ಬಂದಿರುತ್ತದೆ. ಶಾಲೆಯು (QWP) ಗುಣಮಟ್ಟದಲ್ಲಿ 84.80% ಗಳಿಸಿದ್ದು ‘A’ ಗ್ರೇಡ್ ಗಳಿಸಿರುತ್ತದೆ. ໖ ໑໖ 2026-27 PMSHRI -Prime Minister’s School for Rising India ಯೋಜನೆಗೆ ಒಳಪಟ್ಟಿದ್ದು ವಿದ್ಯಾರ್ಥಿಗಳಿಗೆ ಎಲ್ಲಾ ವಿಶೇಷ ಸೌಲಭ್ಯಗಳು ಸರಕಾರದಿಂದ ದೊರೆಯಲಿದೆ. ಇದರ ಸದುಪಯೋಗವನ್ನು ಮೂರ್ನಾಡುವಿನ ಹಾಗೂ ಸುತ್ತಮುತ್ತಲಿನ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ತಮ್ಮ ಶಾಲೆ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯೋಪಾಧ್ಯಾಯರಿಗೆ, ಬೋಧಕ ಮತ್ತು ಬೋಧಕೇತರ ವೃಂದದವರಿಗೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರಿಗೆ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. (ಎಸ್.ಸುರೇಶ್, ಶ್ರೀ ಭಗವಾನ್ ಬಿಲ್ಡರ್ಸ್, ಮಾಲೀಕರು ಹಾಗೂ ಸಮಾಜ ಸೇವಕರು, ಮೂರ್ನಾಡು) (9448406534)








