
ಮಡಿಕೇರಿ ಮೇ 22 NEWS DESK : ಸಾಮಾಜಿಕ ಜಾಲತಾಣದ ಗುಂಪೊಂದರ ಪ್ರಮುಖರೊಬ್ಬರು ಜನಪ್ರತಿನಿಧಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅಶಾಂತಿ ಸೃಷ್ಟಿಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮಡಿಕೆರಿ ನಗರಸಭೆಯ ಸರ್ವ ಪಕ್ಷಗಳ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಎಸ್‍ಪಿ ಆರ್.ಎನ್.ಬಿಂದುಮಣಿ ಅವರನ್ನು ಇಂದು ಭೇಟಿಯಾದ ನಗರಸಭಾ ಸದಸ್ಯರು ಕೊಡಗು ಅಭಿವೃದ್ಧಿ ಸಮಿತಿ ಹೆಸರಿನ ಗ್ರೂಪ್ ನ ಪ್ರಸನ್ನ ಭಟ್ ಎಂಬುವವರ ವಿರುದ್ಧ ದೂರು ನೀಡಿದರು. ಸುಳ್ಳು ವಿಚಾರಗಳನ್ನು ಸತ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ನಗರಸಭಾ ಸದಸ್ಯರುಗಳ ಅಧ್ಯಯನ ಪ್ರವಾಸವನ್ನು ಮೋಜು ಮಸ್ತಿಯ ಪ್ರವಾಸ ಎಂಬಂತೆ ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರತಿಬಿಂಬಿಸಿ ಸಾರ್ವಜನಿಕವಾಗಿ ನಿಂದಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಸನ್ನ ಭಟ್ ಅವರು ತಮ್ಮ ಸ್ವಂತ ಜೀಪ್‍ಗೆ ಅಭಿವೃದ್ಧಿ ಸಮಿತಿಯ ಬೋರ್ಡ್‍ನ್ನು ಅಳವಡಿಸಿಕೊಂಡು, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಮಧ್ಯೆ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವ ಸೋಗಿನಲ್ಲಿ ಸ್ಥಳೀಯ ವಾಹನ ಸವಾರರಿಗೆ ತೊಂದರೆ ಕೊಡುವುದು ಮತ್ತು ಅದೆಷ್ಟೋ ಬಾರಿ ತನ್ನ ಜೀಪ್‍ನ್ನು ವಾಹನ ನಿಲುಗಡೆ ನಿಷೇಧವಿರುವ ಜಾಗದಲ್ಲಿ ನಿಲ್ಲಿಸಿ, ಇದನ್ನು ಪ್ರಶ್ನಿಸಿದ ಸ್ಥಳೀಯರೊಂದಿಗೆ ಅನವಶ್ಯಕವಾಗಿ ಜಗಳವಾಡಿ ಸಾರ್ವಜನಿಕವಾಗಿ ಶಾಂತಿಭಂಗ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯರು ಒತ್ತಾಯಿಸಿದ್ದಾರೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ನಗರಸಭಾ ಸದಸ್ಯರುಗಳಾದ ಸತೀಶ್ ಎಸ್.ಸಿ., ಅರುಣ್ ಶೆಟ್ಟಿ, ಅಪ್ಪಣ್ಣ, ಶಾರದಾ ನಾಗರಾಜ್, ಜುಲೇಕಾಬಿ, ಕೆ.ಎಸ್.ರಮೇಶ್, ಶ್ವೇತಾ ಪ್ರಶಾಂತ್, ಸಬಿತಾ, ಚಂದ್ರಶೇಖರ್, ಮುದ್ದುರಾಜು, ಸದಾ ಮುದ್ದಪ್ಪ ಮತ್ತಿತರರು ದೂರು ನೀಡುವ ಸಂದರ್ಭ ಹಾಜರಿದ್ದರು.









