
ಮಡಿಕೇರಿ NEWS DESK ಜೂ.29 : ಬೆಂಗಳೂರಿನ ಹೆಬ್ಬಾಳದಲ್ಲಿ ಗೌಡ ರೈಡರ್ಸ್ ಕ್ಲಬ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. “ರೈಡ್ ಫಾರ್ ಯೂನಿಟಿ” ಎಂಬ ಗೌಡ ಸಮುದಾಯದ ಐಕ್ಯತಾ ರೈಡ್ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 40 ರೈಡರ್ಸ್ ಹಾಗೂ 5 ಪಿಲಿಯನ್ ರೈಡರ್ಸ್ (ಹಿಂಬದಿ ಸವಾರರು) ಭಾಗವಹಿಸಿದ್ದರು. ವಿಶೇಷವಾಗಿ ಮಡಿಕೇರಿ, ಹಾಸನ, ಸುಳ್ಯ, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈಡರ್ಸ್ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ವಿಂಗ್ ಕಮಾಂಡರ್ (ನಿವೃತ್ತ) ಅಯ್ಯೇಟ್ಟಿರ ಮನೋಜ್ ಕುಮಾರ್, ಅವರು “ಗೌಡ ರೈಡರ್ಸ್ ಕ್ಲಬ್ ಕೇವಲ ಬೈಕ್ ರೈಡಿಂಗ್ ಗೆ ಮಾತ್ರ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಸಮಾಜ ಸೇವೆ, ಯುವಜನರ ಸಂಘಟನೆ ಹಾಗೂ ಸಮುದಾಯದ ಹಿತಕ್ಕಾಗಿ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ” ಎಂದು ತಿಳಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರು ಹಾಗೂ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಬೇಕಲ್ ಬಿಪಿನ್, ನಿರ್ದೇಶಕರಾದ ಕಾಳೆಯಂಡ ತೇಜ ಕುಮಾರ್, ಕಾಚಿಲಂಡ ಅಶೋಕ್, ದಕ್ಷಿಣ ಕನ್ನಡ ಗೌಡ ಸಮಾಜದ ಕಾರ್ಯದರ್ಶಿ ಕುಂಬುಗೌಡನ ಸೋಮಣ್ಣ, ಕಡ್ಲೆರ ಮಿಥುನ್, ಎಡಿಕೇರಿ ಚರಣ್, ಸಂಚಾಲಕರಾದ ಹರೀಶ್ ಕಂಬಳ ಹಾಗೂ ಗೌಡ ರೈಡರ್ಸ್ ಕ್ಲಬ್ ನ ಸ್ಥಾಪಕ ತರುಣ್ ಕೂಡಕಂಡಿ ಉಪಸ್ಥಿತರಿದ್ದು, ಐಕ್ಯತಾ ರೈಡಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಗೌಡ ಸಮುದಾಯದ ಐಕ್ಯತೆ, ಸ್ನೇಹ, ಶಿಸ್ತು ಮತ್ತು ಸುರಕ್ಷಿತ ಬೈಕ್ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಭವಿಷ್ಯದಲ್ಲಿಯೂ ಗೌಡ ರೈಡರ್ಸ್ ಕ್ಲಬ್ ಸಮಾಜಮುಖಿ ಚಟುವಟಿಕೆಗಳು ಹಾಗೂ ಯುವಜನರನ್ನು ಒಗ್ಗೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಸಂಘಟಕರು ತಿಳಿಸಿದರು.








