
ವಿರಾಜಪೇಟೆ NEWS DESK ಜೂ.28 : ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಕ್ಯಾಪ್ಟನ್ ಬಾಚುರ ಎಸ್.ಪೂಣಚ್ಚ ಅವರು ದೀಪ ಬೆಳಗುವ ಮೂಲಕ ಘಟಕವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುತ್ತದೆ. ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ. ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆಯನ್ನು ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು, ಸಾಮಾಜಿಕ ಜಾಲತಾಣ, ಕಾನೂನುಬಾಹಿರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಉತ್ತಮ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು. ದೇಶ ನಮಗೆ ಎಲ್ಲವನ್ನೂ ನೀಡಿದೆ, ಆದ್ದರಿಂದ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶ ಸೇವೆ ಎಂದರೆ ಕೇವಲ ಸೈನ್ಯಕ್ಕೆ ಸೇರುವುದು ಮಾತ್ರವಲ್ಲ, ಕಾನೂನು ಪಾಲಿಸುವುದು, ಸಮಾಜದ ಒಳಿತಿಗಾಗಿ ದುಡಿಯುವುದು ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದೂ ದೇಶ ಸೇವೆಯೇ ಆಗಿದೆ. ಯುವಜನರು ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಪದ್ಮ ಅವರು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು ಸಮಾಜದ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು. ವೀಕ್ಷಿತಾ ಹಾಗೂ ತಂಡದವರು ಪ್ರಾರ್ಥಿಸಿದರು. ಆಂಗ್ಲ ಉಪನ್ಯಾಸಕಿ ಎಂ.ಪಿ.ಡೈನ ಸೋಮಯ್ಯ ಸ್ವಾಗತಿಸಿ, ರಾಷ್ಟೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ವೀಣಾ ಹಾಗೂ ಕುಮಾರಿ ರಕ್ಷಿತಾ ನೆರವೇರಿಸಿದರು. ಸ್ವಯಂ ಸೇವಕರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿಕೊಟ್ಟರು. ಸಮಾರಂಭದಲ್ಲಿ ವಕೀಲೆ ಅನುಪಮ ಕಿಶೋರ್ ವಕೀಲರು, ವಿರಾಜಪೇಟೆ ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಪಿ.ಗಾಯತ್ರಿ, ಕೆ.ಪಿ.ಬೋಪಣ್, ಪಮಿತಾ, ಉಪನ್ಯಾಸಕ ವೃಂದದವರು, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









