
ಮಡಿಕೇರಿ NEWS DESK ಜೂ.28 : ಮಾರಕ ರೋಗ ಪಲ್ಸ್ ಪೋಲಿಯೋವನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ವರ್ಷಂಪ್ರತಿ ಆಯೋಜಿಸಿಕೊಂಡು ಬರುತ್ತಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಯಶಸ್ವಿಯಾಗಿ ನಡೆಯಿತು. ವಿರಾಜಪಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಇಂದು ಬೆಳಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪುಟಾಣಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನಿತ್ತರು.
ಕೊಡಗು ಜಿಲ್ಲೆಯಲ್ಲಿ 0–5 ವರ್ಷದೊಳಗಿನ ಮಕ್ಕಳ ಒಟ್ಟು 29,011 ಗುರುತಿಸಿದ್ದು ,ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 26,373 ಮಕ್ಕಳು ಹಾಗೂ ನಗರ ಪ್ರದೇಶದಲ್ಲಿ 2,638 ಮಕ್ಕಳಿದ್ದು, ಇವರುಗಳಿಗೆ ಲಸಿಕೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಲಸಿಕಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲಾಯಿತು. 471 ಬೂತ್‌ಗಳಲ್ಲಿ ಲಸಿಕೆ- ಜಿಲ್ಲೆಯಲ್ಲಿ ಒಟ್ಟು 471 ಬೂತ್‌ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ನೀಡಲಾಯಿತು. ಜನಸಂದಣಿ ಇರುವ ಪ್ರದೇಶ ಮತ್ತು ಬಸ್ ನಿಲ್ದಾಣಗಳು ಹಾಗೂ ಪ್ರವಾಸಿ ಕೇಂದ್ರಗಳನ್ನು ಗುರಿಯಾಗಿಸಿ 33 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿತ್ತಲ್ಲದೆ, ಮಡಿಕೇರಿ ತಾಲ್ಲೂಕಿನಲ್ಲಿ 1 ಸಂಚಾರಿ ತಂಡದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಟ್ಟಣ ಪ್ರದೇಶಗಳ ಬಸ್ ನಿಲ್ದಾಣ, ಜನಸಂದಣಿ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಹೊರ ಪ್ರದೇಶಗಳಿಂದ ಬರುವ ಜನರೊಂದಿಗೆ ಇರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪಲ್ಸ್ ಪೋಲಿಯೋ ಲಸಿಕೆಗಳನ್ನು ನೀಡುವ ಮೂಲಕ, ಒಟ್ಟು ಅಭಿಯಾನ ಪರಿಣಾಮಕಾರಿಯಾಗಲು ಸಹಕರಿಸಿದರು. ಲಸಿಕಾ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚಿನ ಮಂದಿ- ಜಿಲ್ಲೆಯಾದ್ಯಂತ ಲಸಿಕಾ ಬೂತ್‌ಗಳಲ್ಲಿ ಒಟ್ಟು 1,952 ಲಸಿಕೆ ಹಾಕುವವರು, 84 ಮಂದಿ ಮೇಲ್ವಿಚಾರಕರು ಕಾರ್ಯನಿರ್ವಹಿಸಿದ್ದು ವಿಶೇಷ. ಇವರೊಂದಿಗೆ ಸ್ವಯಂ ಸೇವಾ ಸಂಸ್ಥೆಗಳಾದ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳ ಸ್ವಯಂ ಸೇವಕರು ಪಾಲ್ಗೊಂಡು ಸಹಕರಿಸಿದರು. ಮನೆ ಮನೆ ಭೇಟಿ-ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ 2 ನೇ ಹಾಗೂ 3 ನೇ ದಿನದಂದು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಎರಡನೇ ದಿನದಿಂದ ನಾಲ್ಕನೇ ದಿನದವರೆಗೆ ನಗರ ಪ್ರದೇಶದ ಮನೆ ಮನೆಗಳಿಗೆ ಭೇಟಿ ನೀಡಿ, ಬಿಟ್ಟು ಹೋಗಿರುವ ಅಥವಾ ಅಲ್ಲಿರುವ ಮನೆಗಳಿಗೆ ಹೊಸದಾಗಿ ಬರುವ ಮಕ್ಕಳನ್ನು ಗುರುತಿಸಿ ಲಸಿಕೆಯನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಒಟ್ಟು 1,42,030 ಮನೆಗಳಿಗೆ ಮನೆ-ಮನೆ ಭೇಟಿ ನೀಡಲು ಒಟ್ಟು 976 ತಂಡಗಳನ್ನು ರಚಿಸಲಾಗಿದೆಯೆಂದು ಡಿಹೆಚ್‌ಒ ಡಾ. ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ. ಪ್ರವಾಸಿ ಸ್ಥಳಗಳತ್ತ ನಿಗಾ- ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿನ ಮಕ್ಕಳನ್ನು ಗುರುತಿಸಿ, ಅವರು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಿಗಾವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಬೂತ್‌ಗಳನ್ನು ತೆರೆದು ಒಂದರಿಂದ ನಾಲ್ಕನೇ ದಿನದವರೆಗಿನ ದಿನಗಳಲ್ಲಿ ಸಂತೆ ನಡೆಯುವ ಸ್ಥಳಗಳಲ್ಲಿ ಸಹ ಟ್ರಾನ್ಸಿಟ್ ಬೂತ್‌ಗಳನ್ನು ತೆರೆದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದೆಂದು ಡಾ. ಸತೀಶ್ ಕುಮಾರು ಮಾಹಿತಿ ನೀಡಿದ್ದಾರೆ.










