
ಸಿದ್ದಾಪುರ NEWS DESK ಜೂ.28 : ಸಿದ್ದಾಪುರ ಸಮೀಪದ ಅಭ್ಯತ್ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಲ್‌ಬ್ಲೂಮ್ಸ್ ಹೆಲ್ತ್‌ಕೇರ್, ಸಿದ್ದಾಪುರ ,ಹಾಗೂ ಎಸ್‌ಎಲ್‌ವಿ ಗ್ರೂಪ್, ಕುಶಾಲನಗರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು “ಆರೋಗ್ಯ ಮತ್ತು ಶಿಕ್ಷಣ ಪರಸ್ಪರ ಪೂರಕವಾದ ಅಮೂಲ್ಯ ಸಂಪತ್ತುಗಳು. ಇವೆರಡನ್ನು ನಾವು ಗಳಿಸಿದರೆ ಅವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದರು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಮತ್ತು ಆರೋಗ್ಯದ ಅರಿವು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಶಾಲೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ಘೋಷಿಸಿದ ಅವರು, ಶಾಲೆಗೆ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಮುಂದಿನ ಸಾಲಿನಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಆರಂಭಿಸಲು ಸೂಚಿಸಿದರು. ಶಾಲೆಯ ಶಿಕ್ಷಕ ವೃಂದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸೇವೆಯನ್ನು ಶಾಸಕರು ವಿಶೇಷವಾಗಿ ಶ್ಲಾಘಿಸಿದರು. ಅಲ್ಲದೆ, ವಿವಿಧ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರು ಇದೇ ಸಂದರ್ಭದಲ್ಲಿ ಹಿಲ್‌ಬ್ಲೂಮ್ಸ್ ಆಸ್ಪತ್ರೆಯ ವ್ಯವಸ್ಥಾಪಕರಾದ ಸಮದ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿಲ್‌ಬ್ಲೂಮ್ಸ್ ಹೆಲ್ತ್‌ಕೇರ್‌ನ ಡಾ. ನಿತ್ಯಾ, ಹಾಗೂ ಪೌಷ್ಟಿಕ ತಜ್ಞೆ ಅಭಿರಾಮಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಎಸ್‌ಎಲ್‌ವಿ ಗ್ರೂಪ್, ಕುಶಾಲನಗರ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಮಡಿಕೇರಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ಎಂ ಕಾರ್ಯಕ್ರಮದ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಿರ್ವಹಿಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಪಿಡಿಒ ಮೇದಪ್ಪ, ಪ್ರಮುಖ ದಾನಿಗಳು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡೋಲ್ಪಾಡಿ ಯಶವಂತ್, ಶಿಶಿರ, ಮಜೀದ್, ಮಣಿ, ಕೆದಂಬಾಡಿ ಪ್ರಸನ್ನ, ಕಾಂಗ್ರೆಸ್ ಪಕ್ಷದ ಮುಖಂಡರಾದ ಹೊಸಮನೆ ವಸಂತ್, ನಿರ್ವಾಣಿ ವಿಜಯ್ ಕುಮಾರ್, ಸರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.








