
ಮಡಿಕೇರಿ ಜು.2 NEWS DESK : ರಸ ಗೊಬ್ಬರ ಪೂರೈಕೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದ್ದು, ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪ್ರಮುಖರು ಎಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರಿ, ಹಲವಾರು ವರ್ಷಗಳಿಂದ ರಸ ಗೊಬ್ಬರ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಸಬ್ಸಿಡಿ ವ್ಯಾಪ್ತಿಗೆ ಒಳಪಡುವ ರಸ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಮಾತ್ರವಲ್ಲದೇ ಗೊಬ್ಬರ ಜೊತೆಯಲ್ಲಿಯೇ ಇತರ ಉತ್ಪನ್ನಗಳನ್ನು ಖರೀದಿಸಬೇಕೆಂದು ರೈತರನ್ನು ಒತ್ತಾಯಿಸಲಾಗುತ್ತಿದೆ. ಮಾತ್ರವಲ್ಲದೇ ಗೊಬ್ಬರ ಉತ್ಪಾದಕ ಕಂಪೆನಿಯೇ ಗೊಬ್ಬರ ಸರಬರಾಜು ದರವನ್ನು ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ರೈತರಿಂದಲೇ ಸರಬರಾಜು ದರ ವಸೂಲಿ ಮಾಡಲಾಗುತ್ತಿದೆ. ಈ ಎಲ್ಲಾ ವಿಚಾರಗಳು ಕೃಷಿ ಅಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೂ ಮಾಹಿತಿ ಇದೆ. ಆದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಇಂತಹ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ರೈತರಿಗೆ ಅಗತ್ಯವಿರುವ ರಸ ಗೊಬ್ಬರಗಳ ವ್ಯವಸ್ಥಿತ ಪೂರೈಕೆಗೆ ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸಿ ರಾಜ್ಯ ವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಆರ್‍ಎಸ್ ಪಕ್ಷದ ರೈತ ಘಟಕದ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ಸರಕಾರ ಮತ್ತು ರಾಜಕಾರಣಿಗಳು ‘ರೈತರೇ ದೇಶದ ಬೆನ್ನೆಲುಬು’ ಎಂದು ಹೇಳುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ರೈತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೊಬ್ಬರ ಡೀಲರ್‍ಗಳು, ಕಂಪೆನಿಗಳು ಲಾಭ ಪಡೆಯುತ್ತಿದ್ದು, ರೈತರ ಕಷ್ಟವನ್ನು ಯಾರು ಕೇಳುತ್ತಿಲ್ಲ ಎಂದು ವಿಷಾಧಿಸಿದರು. ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಕೆಗೆ ಸರಕಾರ ಕ್ರಮ ಕೈಗೊಳ್ಳಬೇಕು. ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಆರ್‍ಎಸ್ ಪಕ್ಷದ ಪ್ರಮುಖರಾದ ಕೆ.ಆರ್.ಪ್ರಭುಸ್ವಾಮಿ, ಕಂದಳ್ಳಿ ಮಹೇಶ್, ಟಿ.ವಿ.ಶೇಖರ್ ಉಪಸ್ಥಿತರಿದ್ದರು.








