
ಮಡಿಕೇರಿ ಜು.7 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಸೌಹಾರ್ದ ಸಹಕಾರ ಸಂಘ ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೊಡಗು ಗೌಡ ಸಮಾಜದಲ್ಲಿರುವ ಯುವ ವೇದಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಯುವ ವೇದಿಕೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಯುವ ವೇದಿಕೆ ಮುಖಾಂತರ ಸೌಹಾರ್ದ ಸಹಕಾರ ಸಂಘ ರಚನೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ರಚನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತದ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಜಿಲ್ಲಾ ಸಂಯೋಜಕ ಸುರೇಶ್ ಅವರುಗಳು ಸಹಕಾರ ಸಂಘ ರಚನೆ ಮಾಡುವ ಬಗ್ಗೆ ಮಾಹಿತಿ ಒದಗಿಸಿ, ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು. ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮಾತನಾಡಿ, ಏಪ್ರಿಲ್, ಮೇ ತಿಂಗಳಿನಲ್ಲಿ ಏರ್ಪಡಿಸಿದ್ದ ಕೊಡಗು ಗೌಡ ಯುವ ವೇದಿಕೆ ಕ್ರೀಡಾಕೂಟ ಬಹಳ ಅದ್ದೂರಿಯಾಗಿ ನಡೆದಿದೆ. ಇದೇ ಪ್ರಥಮ ಬಾರಿಗೆ ನಡೆಸಲಾದ ರಿಂಕ್ ಹಾಕಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ, ಜೊತೆಗೆ ಮಿಸ್ಟರ್ ಗೌಡ, ಮಿಸಸ್ ಗೌಡತಿಗೂ ಹಲವು ಪ್ರಶಂಸೆಗಳು ಬಂದಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು. ಯುವ ವೇದಿಕೆಯ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಹಗಲು ರಾತ್ರಿ ಶ್ರಮಿಸಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು. ಸಭೆಯಲ್ಲಿ ಕ್ರೀಡಾಕೂಟದ ಲೆಕ್ಕಚಾರದ ಕುರಿತ ಚರ್ಚೆ ನಡೆಯಿತು. ಇನ್ನೂ ಮುಂದಿನ ವರ್ಷ ಕೂಡ ಯುವ ವೇದಿಕೆಯ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಹಾಗೂ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು. ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಚನ ಸತೀಶ್, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ, ಸಹಕಾರ್ಯದರ್ಶಿ ಕೆದಂಬಾಡಿ ಕಾಂಚನ, ಖಜಾಂಚಿ ನವೀನ್ ದೇರಳ, ಗೌರವ ಸಲಹೆಗಾರ ಪೈಕೇರ ಮನೋಹರ್, ಕ್ರೀಡಾ ಅಧ್ಯಕ್ಷ ಕುಟ್ಟನ ಪ್ರಶಾಂತ್, ಪರಿಚನ ಸೋನಿಯ, ಕಟ್ಟೆಮನೆ ರೋಶನ್, ಕುಕ್ಕೇರ ಲಕ್ಷ್ಮಣ, ಕಲ್ಲುಮುಟ್ಲು ಅನುದೀಪ್, ದುಗ್ಗಳ ಕಪಿಲ್, ಚೆರಿಯಮನೆ ಪೆಮ್ಮಯ್ಯ, ಪೊಕ್ಕುಳಂಡ್ರ ಮನೋಜ್, ಧನೋಜ್ ಸೇರಿದಂತೆ ಕೊಡಗು ಗೌಡ ಯುವ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.









