
ಮಡಿಕೇರಿ ಜು.15 NEWS DESK : ಸದಾ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರಿಂದು ವಿಶಿಷ್ಟ ಅನುಭವವನ್ನು ಪಡೆದರು. ಹರಿಯುವ ನೀರಿನಲ್ಲಿ ನಡೆಯುವ ಸಾಹಸಮಯ ಜಲಕ್ರೀಡೆಯಾದ ರ‍್ಯಾಪ್ಟಿಂಗ್ ನಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಬಳಿಯ ಕೆ.ಕೆ.ಆರ್.ನಲ್ಲಿರುವ ಬರಪೊಳೆಯಲ್ಲಿ ರಿವರ್ ರ‍್ಯಾಪ್ಟಿಂಗ್ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪತ್ರಕರ್ತರು ನಾಲ್ಕು ಕಿ.ಮೀ. ದೂರ ಬರಪೊಳೆಯಲ್ಲಿ ಜೀವರಕ್ಷಕ ಜಾಕೆಟ್ ಸಹಿತ ರ್ಯಾಫ್ಟ್ ಗಳಲ್ಲಿ ಕ್ರಮಿಸಿ ವಿನೂತನ ಅನುಭವ ಪಡೆದುಕೊಂಡರು. ಕೂರ್ಗ್ ವೈಟ್ ವಾಟರ್ ರ್ಯಾಫ್ಟಿಂಗ್ ತಂಡದ ನುರಿತರು ಸುರಕ್ಷತೆಯಿಂದ ನೀರಿನ ಮಧ್ಯೆ ಕರೆದೊಯ್ದರು. ಪತ್ರಕರ್ತರು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು. ರ‍್ಯಾಪ್ಟಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ತೀತಿರ ಧರ್ಮಜ ಉತ್ತಪ್ಪ, ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಈ ರೀತಿಯ ಕಾರ್ಯಕ್ರಮ ಪೂರಕವಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು ಮುಂಚೂಣಿಯಲ್ಲಿದ್ದು, ಸಾಮಾಜಿಕ ಚಿಂತನೆಗಳೊಂದಿಗೆ ಜಿಲ್ಲೆಯ ಹಿತ ಕಾಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಅಲ್ಲದೆ ಕೊಡಗಿನ ಪತ್ರಕರ್ತರು ವೃತ್ತಿಧರ್ಮ ಪಾಲಿಸುತ್ತ ಪ್ರಾಮಾಣಿಕತೆ ಮೈಗೂಡಿಸಿಕೊಂಡು ಮಾದರಿಯಾಗಿದ್ದಾರೆ. ವಸ್ತುನಿಷ್ಠ ವರದಿಗಾರಿಕೆಯಿಂದ ಪತ್ರಕರ್ತರು ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಬರಪೊಳೆ ರ್ಯಾಫ್ಟಿಂಗ್ ವಿನೂತನ ಅನುಭವ ನೀಡುವುದರೊಂದಿಗೆ ಸುರಕ್ಷತೆಯಿಂದ ಕೂಡಿದೆ. ಈ ಭಾಗ ಪ್ರವಾಸೋದ್ಯಮದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿಕೊಳ್ಳಬೇಕೆಂದು ಆಶಿಸಿದರು. ಕೂರ್ಗ್ ರ್ಯಾಫ್ಟಿಂಗ್ ನ ಮಾಲೀಕ, ಪರಿಸರ ಪ್ರೇಮಿ ಕುಂಞಂಗಡ ಬೋಸ್ ಮಾದಪ್ಪ ಮಾತನಾಡಿ, ಒಂದೂವರೆ ದಶಕಗಳಿಂದ ಸುರಕ್ಷಿತವಾಗಿ ರ‍್ಯಾಪ್ಟಿಂಗ್ ನಡೆಸಿಕೊಂಡು ಬರಲಾಗುತ್ತಿದೆ. ಕಕ್ಕಟ್ ಪೊಳೆ ಜಲಮೂಲದಿಂದ ಹರಿಯುವ ನದಿ ತನ್ನ ಶುದ್ಧತೆಗೆ ಹೆಸರುವಾಸಿಯಾಗಿದೆ ಹಾಗಾಗಿ ಇದನ್ನು ವೈಟ್ ವಾಟರ್ ರ‍್ಯಾಪ್ಟಿಂಗ್ ಎಂದು ಕರೆಯಲಾಗುತ್ತದೆ. ಮಳೆ ಕೊಂಚ ಇಳಿಮುಖವಾದ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೂ ರ‍್ಯಾಪ್ಟಿಂಗ್ ನಡೆಸಲು ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಸಂಘದ ವತಿಯಿಂದ ಹಲವು ವರ್ಷಗಳ ಬಳಿಕ ರ್ಯಾಫ್ಡಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ. ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರಿಗಾಗಿ ಆಟೋಟ ಸೇರಿದಂತೆ ಮನರಂಜನಾ ಚಟುವಟಿಕೆಯನ್ನು ಸಂಘದ ವತಿಯಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.ದಾಂಡೇಲಿ ರೀತಿಯ ವೈಟ್ ರಿವರ್ ರ್ಯಾಫ್ಟಿಂಗ್ ಕೊಡಗಿನ ಬರಪೊಳೆಯಲ್ಲಿರುವುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









