
ಮಡಿಕೇರಿ ಜು.15 NEWS DESK : ಇತ್ತೀಚೆಗೆ ನಿಧನರಾದ ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ, ಸಂಗೀತ ವಿಶಾರದೆ ಎಸ್. ಜಾನಕಿ ಅವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮರ್ಥ ಕನ್ನಡಿಗರು ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕಿ, ಉಪನ್ಯಾಸಕಿ ಹಾಗೂ ಸಾಹಿತಿ ಜಯಲಕ್ಷ್ಮಿ ಅವರು, “ತಮ್ಮ ಅಮೋಘ ಕಂಠಸಿರಿಯಿಂದ ಭಾರತೀಯ ಸಿನಿಮಾ ರಂಗವನ್ನು ಸುವರ್ಣ ಯುಗವನ್ನಾಗಿಸಿದ ಕೀರ್ತಿ ಎಸ್. ಜಾನಕಿ ಅವರಿಗೆ ಸಲ್ಲುತ್ತದೆ. 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗಾನಕೋಗಿಲೆ ಜಾನಕಿಯವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಅವರ ಅಪ್ರತಿಮ ಸಾಧನೆ ಮತ್ತು ಹಾಡುಗಳು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ” ಎಂದು ಗುಣಗಾನ ಮಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ ಸಮರ್ಥ ಕನ್ನಡಿಗರು ಬಳಗದ ಪ್ರಮುಖರಾದ ಸೌಮ್ಯ ಭಟ್, ಪವಿತ್ರಾ, ಅನಿತಾ ಅಂಬಿಕಾ ಹಾಗೂ ಶ್ರೀಲತಾ ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು.









