
ಮಡಿಕೇರಿ ಜು.15 NEWS DESK : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಬುಧವಾರ ನಗರಸಭೆಗೆ ಭೇಟಿ ನೀಡಿ ಹಲವು ಮಾಹಿತಿ ಪಡೆದರು. ಪೌರ ಕಾರ್ಮಿಕರಿಗೆ ವಿತರಿಸಲು ಪೂರೈಕೆಯಾಗಿರುವ ಗಂಬೂಟ್, ಜಾಕೆಟ್, ಗ್ಲೌಸ್, ಸೇಪ್ಟಿ ಹೆಲ್ಮೇಟ್, ಮಾಸ್ಕ್, ಸ್ವೆಟರ್, ಟೋಪಿ, ಲೆದರ್ ಶೂ, ರೈನ್ ಕೋಟ್ ಮತ್ತು ಹೊಲಿಗೆ ಯಂತ್ರ ಮತ್ತಿತರವನ್ನು ಪರಿಶೀಲಿಸಿದರು. ಕೂಡಲೇ ಶಾಸಕರಿಂದ ಪೌರಕಾರ್ಮಿರಿಗೆ ಪರಿಕರವನ್ನು ವಿತರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಬಳಿಕ ಕೌನ್ಸಿಲ್ ಸಭಾಂಗಣಕ್ಕೆ ತೆರಳಿ ಅಲ್ಲಿನ ಮ್ಯಾಟ್ ಬದಲಿಸುವುದು, ಸುಣ್ಣ ಬಣ್ಣ ಬಳಿಸುವಂತೆ ನಿರ್ದೇಶನ ನೀಡಿದರು. ವಿವಿಧ ಕೆಲಸಗಳಿಗೆ ಸಾರ್ವಜನಿಕರು ನಗರಸಭೆಗೆ ಮನವಿ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ತಕ್ಷಣವೇ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನಿರ್ದೇಶನ ನೀಡಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಇರುವುದರಿಂದ ಸಿಬ್ಬಂದಿಗಳು ಅದರಲ್ಲಿ ನಿಯೋಜಿಸಲಾಗಿದ್ದು, ಪ್ರಗತಿಯ ನಂತರ ನಗರಸಭೆ ಪ್ರತಿನಿತ್ಯ ಕೆಲಸಗಳು ಆಗಲಿವೆ ಎಂದು ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಮಾಹಿತಿ ನೀಡಿದರು. ನಂತರ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಪ್ರತಿನಿತ್ಯ ಗ್ರಂಥಾಲಯಕ್ಕೆ ಓದುಗರ ಭೇಟಿ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಬಳಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದ ವಿಭಾಗಕ್ಕೆ ತೆರಳಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳಿಗೆ, ಪರೀಕ್ಷೆ ಎದುರಿಸುವುದು ಹೇಗೆ, ಪರೀಕ್ಷಾ ಸಿದ್ಧತೆ ಬಗ್ಗೆ ವಿವರಿಸಿದರು. ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಓದುಗರಿಗೆ ತರಿಸಿಕೊಡುವಂತೆ ಗ್ರಂಥಪಾಲಕರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಸ್ಪರ್ಧಾಥಿಘಲು ಉತ್ತಮವಾಗಿ ಅಧ್ಯಯನ ಮಾಡಿ, ನಾಗರಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯುವಂತೆ ಸಲಹೆ ಮಾಡಿದರು. ಕೇಂದ್ರ ಮತ್ತು ರಾಜ್ಯ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಹೆಚ್ಚಿನ ಅಂಕ ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಸಲಹೆ ಮಾಡಿದರು. ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ತರಿಸಿಕೊಡಲಾಗುವುದು. ಆ ನಿಟ್ಟಿನಲ್ಲಿ ಪಟ್ಟಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಗ್ರಂಥಪಾಲಕರಾದ ಲೋಕೇಶ್ ಅವರು ಗ್ರಂಥಾಲಯ ಚಟುವಟಿಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.









