
ಸುಂಟಿಕೊಪ್ಪ ಜು.22 NEWS DESK : ಗ್ರಾಮದ ಜನರ ಪ್ರಮುಖ ಬೇಡಿಕೆಗಳಿಗೆ ಅನುಗುಣವಾಗಿ ಅವರೊಂದಿಗೆ ಮೌಖಿಕವಾಗಿ ಚರ್ಚಿಸಿ, ಅವರ ಇಚ್ಛೆಯಂತೆ ಕಾರ್ಯವೈಖರಿ ರೂಪಿಸುವುದರಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಸುಸೂತ್ರವಾಗಿ ಯಶಸ್ಸು ಕಾಣಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು. ಸುಂಟಿಕೊಪ್ಪ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಾಣ ಕುರಿತ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಭೆಯಲ್ಲಿ ಮಾಜಿ ಜನಪ್ರತಿನಿಧಿಗಳು, ವ್ಯಾಪಾರಿಗಳು ಹಾಗೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಮುಕ್ತವಾಗಿ ಆಲಿಸಿದ ಶಾಸಕರು, ಗ್ರಾಮದ ಪ್ರಗತಿಗೆ ಎಲ್ಲರೂ ಪಕ್ಷಾತೀತ ಹಾಗೂ ಜಾತ್ಯತೀತ ನಿಲುವಿನೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ಮುಂದಿನ 10 ದಿನಗಳ ಒಳಗಾಗಿ ವಿಶೇಷ ಗ್ರಾಮಸಭೆಯನ್ನು ಕರೆಯಬೇಕು. ನೂತನ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಿಷ್ಠ 3 ಮಾದರಿಯ ನೀಲಿ ನಕ್ಷೆಗಳೊಂದಿಗೆ (Blueprints) ವಿವರ ನೀಡುವಂತೆ ಕಂದಾಯ ಪರಿವೀಕ್ಷಕ ಎಚ್.ಎಂ. ಪ್ರಶಾಂತ್, ಗ್ರಾ.ಪಂ. ಆಡಳಿತಾಧಿಕಾರಿ ರಾಕೇಶ್ ಹಾಗೂ ಪಿಡಿಒ ವಿ.ಜಿ.ಲೋಕೇಶ್ ಅವರಿಗೆ ಸೂಚನೆ ನೀಡಿದರು. ಲೋಟಸ್ ಬಡಾವಣೆಯಲ್ಲಿರುವ ಮಾರುಕಟ್ಟೆ ಜಾಗ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆ ಪ್ರದೇಶದ ಸರ್ವೆ ಕಾರ್ಯವನ್ನು ತಕ್ಷಣ ನಡೆಸಲು ನಿರ್ದೇಶಿಸಲಾಯಿತು. ಪ್ರಸ್ತುತ ಹೆದ್ದಾರಿ ಬದಿಯಲ್ಲಿರುವ ಕೋಳಿ, ಕುರಿ ಮಾಂಸ ಮತ್ತು ಮೀನು ಮಾರುಕಟ್ಟೆಗಳನ್ನು ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸಲು ತಿಳಿಸಿದರು. ’ಗ್ರಾಮ ಪಂಚಾಯಿತಿಯಿಂದಲೇ ಬಸ್ ನಿಲ್ದಾಣ ನಿರ್ಮಾಣ ಸೂಕ್ತ’ ಬಸ್ ನಿಲ್ದಾಣದ ನಿರ್ಮಾಣದ ಕುರಿತು ಮಾತನಾಡಿದ ಶಾಸಕರು, “ಹಳೆಯ ಮಾರುಕಟ್ಟೆಯ ಜಾಗವನ್ನು ಬಸ್ ನಿಲ್ದಾಣವಾಗಿ ಪರಿವರ್ತಿಸಬಹುದು. ಆದರೆ, ಈ ಜಾಗವನ್ನು ಸಂಪೂರ್ಣವಾಗಿ ಕೆಎಸ್ಆರ್‌ಟಿಸಿಗೆ ಬಿಟ್ಟುಕೊಟ್ಟರೆ ಖಾಸಗಿ ಬಸ್‌ಗಳಿಗೆ ಪ್ರವೇಶ ಸಿಗುವುದಿಲ್ಲ ಮತ್ತು ಪಂಚಾಯಿತಿ ಆದಾಯಕ್ಕೂ ಧಕ್ಕೆಯಾಗುತ್ತದೆ. ಅದೇ ಪಂಚಾಯಿತಿ ವತಿಯಿಂದಲೇ ಬಸ್ ನಿಲ್ದಾಣ ನಿರ್ಮಿಸಿದರೆ ಸರ್ಕಾರಿ ಮತ್ತು ಖಾಸಗಿ ಎರಡೂ ಬಸ್‌ಗಳ ನಿಲುಗಡೆಗೆ ಅವಕಾಶ ಸಿಗಲಿದ್ದು, ಪಂಚಾಯಿತಿಗೂ ಆದಾಯ ಬರಲಿದೆ” ಎಂದು ಸುದೀರ್ಘವಾಗಿ ವಿವರಿಸಿದರು. ಸಭೆಯಲ್ಲಿ ಗ್ರಾ.ಪಂ. ಆಡಳಿತಾಧಿಕಾರಿ ರಾಕೇಶ್, ಕಂದಾಯ ಪರಿವೀಕ್ಷಕ ಪ್ರಶಾಂತ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜರ್ಮಿ ಡಿಸೋಜ, ತಾ.ಪಂ ಮಾಜಿ ಸದಸ್ಯ ಕೆ.ಎಸ್.ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಪಿ.ಆರ್.ಸುನಿಲ್ ಕುಮಾರ್, ಶಿವಮ್ಮ ಮಹೇಶ್, ಎಂ.ಎ.ಉಸ್ಮಾನ್, ಪಿ.ಎಫ್. ಸಬಾಸ್ಟೀನ್, ಜಿ.ಪಂ ಮಾಜಿ ಸದಸ್ಯೆ ಭಾನುಮತಿ, ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಸೇರಿದಂತೆ ಜಿನಾಸುದ್ದೀನ್, ಶಬ್ಬೀರ್, ಆಲಿಕುಟ್ಟಿ, ಫೆಲ್ಸಿ ಡೆನ್ನಿಸ್, ಯಂಕನ ಶ್ರೀರಾಮ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.









